ಮಂಗಳವಾರ, ಜನವರಿ 7, 2020

ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಚಾಲನೆ
ಗ್ರಾಮೀಣ ಕಲಾ ಸಂಸ್ಕೃತಿ ರಕ್ಷಣೆ ಅಗತ್ಯ
-ರಾಜಶೇಖರಗೌಡ ಪಾಟೀಲ್ ವಜ್ಜಲ್
ಯಾದಗಿರಿ, ಜನವರಿ ೦೭ (ಕರ್ನಾಟಕ ವಾರ್ತೆ): ಪುರಾತನ ಕಾಲದಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜಾನಪದ ಕಲಾ ಸಂಸ್ಕೃತಿಯು ಆಧುನಿಕ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಹಾವಳಿಯಿಂದ ಕಣ್ಮರೆಯಾಗುತ್ತಿದೆ. ಹಾಗಾಗಿ, ಇಂತಹ ಕಲಾ ಸಾಂಸ್ಕೃತಿಕ ಚಟುವಟಿಕೆಗಳನ್ನು ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯ ಯುವಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿನ ಕಲಾ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಯುವಜನ ಮೇಳದಂತಹ ಕಾರ್ಯಕ್ರಗಳನ್ನು ಆಯೋಜಿಸುವುದು ಸೂಕ್ತವಾಗಿದೆ. ಇತ್ತೀಚಿಗೆ ಮಾಧ್ಯಮಗಳು ಹೆಚ್ಚಾಗಿರುವುದರಿಂದ ಗ್ರಾಮೀಣ ಕಲೆಗಳು ಮಾಯವಾಗುತ್ತಿವೆ. ಇಂದಿನ ಮಕ್ಕಳಿಗೆ ಕುಟ್ಟುವ, ಬೀಸುವ ಪದಗಳು, ಜಾನಪದ ಗೀತೆಗಳು ಗೊತ್ತಿಲ್ಲ. ಅವುಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ನಮ್ಮ ಕಲಾ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಸರ್ಕಾರ ಯುವಜನ ಮೇಳದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮದ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಕಾರ್ಯಕ್ರಮದ ಉದ್ದೇಶ ಸಾರ್ವಜನಿಕರಿಗೆ ತಲುಪುವಂತಾಗಬೇಕು. ಇಂದಿನ ಗ್ರಾಮೀಣ ಕಲೆಗಳಿಗೆ ಮರುಜೀವ ನೀಡುವುದು ಸರ್ಕಾರದ ಉದ್ದೇಶವಾಗಿದೆ. ನಮ್ಮ ಭವ್ಯ ಪರಂಪರೆಯ ಉಳಿವಿಗೆ ಸರ್ವರು ಪಣ ತೊಡಬೇಕಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ ಅವರು ಮಾತನಾಡಿ, ಸಾಮಾನ್ಯವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವಂತಿರಬೇಕು. ಯುವಜನ ಮೇಳದಂತ ಕಾರ್ಯಗಳನ್ನು ಆಯೋಜಿಸುವಾಗ ಗ್ರಾಮೀಣ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಿ ಕಾರ್ಯಕ್ರಮದ ಉದ್ದೇಶದ ಕುರಿತು ವ್ಯಾಪಕ ಪ್ರಚಾರ ನೀಡಿ, ಗ್ರಾಮೀಣ ಕಲಾ ಸಂಸ್ಕೃತಿಯನ್ನು ರಕ್ಷಿಸುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯವಾಗುತ್ತದೆ. ಬಿಡುವಿಲ್ಲದ ಇಂದಿನ ಜೀವನದಲ್ಲಿ ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳಲು ಕಲಾ ಚಟುವಟಿಕೆಗಳು ಅಗತ್ಯವಿದ್ದು, ನಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಸಂಕೋಚವಿಲ್ಲದೆ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಆಶ್ರಮದ ವೇಣುಗೋಪಾಲ ಅವರು ಮಾತನಾಡಿ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಅಂತರಾಳದ ಚೈತನ್ಯವನ್ನು ಬಡಿದೆಬ್ಬಿಸುವ ಶಕ್ತಿಯ ಕೇಂದ್ರಗಳಾಗಿವೆ. ಮನುಷ್ಯನ ಮನಸ್ಸನ್ನು ಆಧ್ಯಾತ್ಮಿಕ ಚೈತನ್ಯದ ಕಡೆಗೆ ಕರೆದೊಯ್ಯುವ ಶಕ್ತಿ ದೇವಾಲಯಗಳಾದರೆ, ಜಾನಪದ ಕಲಾ ಚಟುವಟಿಕೆಗಳು ಮಾನವನ ಲೌಕಿಕ ಜೀವನದ ಶಕ್ತಿ ಕೇಂದ್ರಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಆಚಾರ, ವಿಚಾರ, ಕಲೆ, ಸಂಸ್ಕೃತಿಯ ಉಳಿವಿಗೆ ಯುಜಜನ ಮೇಳದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವಶ್ಯವಾಗಿದೆ. ನಮ್ಮ ಜಿಲ್ಲೆಯಿಂದ ರಾಜ್ಯ, ರಾಷ್ಟçಮಟ್ಟದವರೆಗೂ ಡೊಳ್ಳು ಕುಣಿತದ ಕಲಾ ತಂಡಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತಂದಿವೆ ಎಂದು ತಿಳಿಸಿದರು.
ಯುವಜನ ಮೇಳದಲ್ಲಿ ಕೋಲಾಟ, ಡೊಳ್ಳು ಕುಣಿತ, ತಬಲಾ ವಾದ್ಯ, ಜಾನಪದ ನೃತ್ಯ, ಜನಪದ ಗೀತೆ, ಭಜನಾ, ಭಾವಗೀತೆ, ಬೀಸುವ, ಕುಟ್ಟುವ ಪದ, ಹಾರ್ಮೋನಿಯಂ, ದೊಡ್ಡಾಟ, ಗೀಗೀ ಪದ, ಸೋಬಾನ ಪದ, ಏಕ ಪಾತ್ರಾಭಿನಯ, ಚರ್ಮವಾದ್ಯ ಮೇಳ, ಶಾಸ್ತಿಯ ಸಂಗೀತ ಹಾಗೂ ಸಣ್ಣಾಟ ಸೇರಿದಂತೆ ಇತರ ಕಲೆಗಳು ಪ್ರದರ್ಶಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಭೀಮಣ್ಣಗೌಡ ಕ್ಯಾತ್ನಾಳ, ರಘುನಾಥರೆಡ್ಡಿ ಅವರು ಉಪಸ್ಥಿತರಿದ್ದರು.ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಪಲ್ಲವಿ ಹಾಗೂ ಬಸ್ಸಮ್ಮ ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕರಾದ ನಿರ್ಮಲಾ ಡಿ. ಸಿನ್ನೂರು ಅವರು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ದಶರಥ ವಂದಿಸಿದರು. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...