ಶುಕ್ರವಾರ, ಜನವರಿ 3, 2020

ವಸತಿನಿಲಯ ಮೇಲ್ವಿಚಾರಕ ಅನಿಲಕುಮಾರ ಅಮಾನತು
ವಸತಿಶಾಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಾಸ್ತವ್ಯ
ಯಾದಗಿರಿ, ಜನವರಿ ೦೩ (ಕರ್ನಾಟಕ ವಾರ್ತೆ): ಪಶುಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಯಾದಗಿರಿ ತಾಲ್ಲೂಕಿನ ಬಂದಳ್ಳಿಯ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ (ನವೋದಯ)ಗೆ ಗುರುವಾರ ರಾತ್ರಿ ಅನಿರೀಕ್ಷಿತ ಭೇಟಿ ನೀಡಿ, ವಸತಿ ನಿಲಯದಲ್ಲಿಯೇ ವಾಸ್ತವ್ಯ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ವಸತಿ ಶಾಲೆಗೆ ಭೇಟಿ ನೀಡಿದಾಗ ನಿಲಯದ ಮೇಲ್ವಿಚಾರಕರಾದ ಅನಿಲಕುಮಾರ ಅವರು ಗೈರಾಗಿದ್ದರು. ಅಲ್ಲದೇ, ಅವರು ಮೊಬೈಲ್ ಸಂಪರ್ಕಕ್ಕೂ ಸಿಗಲಿಲ್ಲ. ಹಾಗಾಗಿ, ವಸತಿನಿಲಯದ ಮೇಲ್ವಿಚಾರಕರನ್ನು ಅಮಾನತು ಮಾಡಲು ಸಚಿವರು ಸೂಚಿಸಿದರು. ಅದರಂತೆ ಅನಿಲಕುಮಾರ ಅವರನ್ನು ಅಮಾನತು ಮಾಡಲಾಗಿದೆ.
ವಸತಿ ಶಾಲೆ ಮಕ್ಕಳೊಂದಿಗೆ ರಾತ್ರಿ ಭೋಜನ ಸವಿದ ಸಚಿವರು, ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ವಸತಿ ನಿಲಯದಲ್ಲಿ ಸ್ವಚ್ಛತೆಯ ಕೊರತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುವ ಗ್ರಂಥಾಲಯ ಮತ್ತು ದಿನಪತ್ರಿಕೆಗಳ ವ್ಯವಸ್ಥೆ ಇಲ್ಲದಿರುವುದು, ಬಿಸಿನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ, ವಿದ್ಯುತ್ ಸಮಸ್ಯೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದನ್ನು ಕಂಡ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಸತಿನಿಲಯದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ರತಿ ವಾರ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿಗಳು ವಸತಿನಿಲಯಕ್ಕೆ ಭೇಟಿ ನೀಡಬೇಕು. ಹತ್ತಿರದಲ್ಲೆ ಇರುವ ಕೆರೆಯಿಂದ ನೀರು ಸರಬರಾಜು ಮತ್ತು ಪೈಪ್‌ಲೈನ್ ವ್ಯವಸ್ಥೆ ಮಾಡಬೇಕು. ಯಾದಗಿರಿ ನಗರದಿಂದ ವಸತಿನಿಲಯಕ್ಕೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಸೋಲಾರ್ ವಾಟರ್ ಹೀಟರ್ ಅಳವಡಿಸುವಂತೆ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಪೂರ್ಣಿಮಾ ಚೂರಿ ಅವರಿಗೆ ಸೂಚಿಸಿದರು.
ವಸತಿನಿಲಯದ ಕಾಂಪೌAಡ್ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಈ ಸಂದರ್ಭದಲ್ಲಿ ನಿರ್ದೇಶಿಸಿದರು. ಶುಕ್ರವಾರ ಬೆಳಿಗ್ಗೆ ಮಕ್ಕಳೊಂದಿಗೆ ಉಪಾಹಾರ ಸೇವಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...