ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ
-ಉಮೇಶ ಬಿ.ಚಿಕ್ಕಮಠ
ಯಾದಗಿರಿ, ಜನವರಿ ೧೭ (ಕರ್ನಾಟಕ ವಾರ್ತೆ): ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳನ್ನು ಆತ್ಮೀಯತೆಯಿಂದ ಆಲಿಸುವ ಜೊತೆಗೆ ಶೀಘ್ರ ಪರಿಹರಿಸಬೇಕು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಉಮೇಶ ಬಿ.ಚಿಕ್ಕಮಠ ಅವರು ಸಲಹೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಗಂಣದಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ದೂರು, ಕುಂದು- ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ದಿನನಿತ್ಯ ಪತ್ರಿಕೆಗಳು ಕೂಡ ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅವುಗಳನ್ನು ಕೂಡ ಓದಿ ತಿಳಿದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ. ಸಾರ್ವಜನಿಕರ ಕೆಲಸ-ಕಾರ್ಯಗಳಿಗಾಗಿ ಹಣಕ್ಕಾಗಿ ಪೀಡಿಸುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ವಿನಾಃ ಕಾರಣ ವಿಳಂಬ ಮಾಡಬಾರದು ಎಂದು ತಿಳಿಸಿದರು.
ಮೆಡಿಕಲ್‌ಗಳಲ್ಲಿ ಪರವಾನಗಿ ಪಡೆಯದ ವ್ಯಕ್ತಿಗಳು ಔಷಧ ವಿತರಣೆ ಮಾಡುವುದು ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕರ ಜೀವದ ಜೊತೆಗೆ ಚೆಲ್ಲಾಟವಾಡಿದಂತಾಗುತ್ತದೆ. ಜೀವ ಹಾನಿ ಕೂಡ ಸಂಭವಿಸಬಹುದು. ಆದ್ದರಿಂದ ಪರವಾನಗಿ ಹೊಂದಿದ ವ್ಯಕ್ತಿಗಳು ಮಾತ್ರ ಔಷಧ ವಿತರಣೆ ಮಾಡಬೇಕು. ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗಳ ಕಾರ್ಯಕ್ಷಮತೆಯ ಮೇಲೆ ನಿಗಾವಹಿಸಬೇಕು. ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಸಚ್ಛತೆ ಬಗ್ಗೆ ಗಮನಹರಿಸಬೇಕು. ಸರ್ಕಾರದ ನಿಯಮದಂತೆ ಗುಣಮಟ್ಟದ ಔಷಧಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಸಾರಿಗೆ ಸಂಸ್ಥೆಯವರು ಬೇಡಿಕೆ ಇರುವ ಮಾರ್ಗಗಳಲ್ಲಿ ಬಸ್‌ಗಳನ್ನು ಸಂಚರಿಸಲು ಕ್ರಮ ವಹಿಸುವಂತೆ ಅವರು ಸಲಹೆ ನೀಡಿದರು.
ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ ಕಟ್ಟಿಮನಿ, ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಮನಗೌಡ, ವಿಷ್ಣು, ವಾಣಿಶ್ರೀ, ಮಹ್ಮದ್ ಗೌಸ್, ಹಣಮಂತ್ರಾಯ, ಕಾನ್‌ಸ್ಟೆಬಲ್‌ಗಳಾದ ನೀಲಕಂಠ, ಸಿದ್ದಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ