ಗುರುವಾರ, ಡಿಸೆಂಬರ್ 19, 2019

ವಿಶ್ವ ಏಡ್ಸ್ ದಿನಾಚರಣೆ: ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಏಡ್ಸ್ ರೋಗ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಅಗತ್ಯ
-ನ್ಯಾ. ಶ್ರೀ ಪ್ರಕಾಶ ಅರ್ಜುನ ಬನಸೊಡೆ
ಯಾದಗಿರಿ, ಡಿಸೆಂಬರ್ ೧೯ (ಕರ್ನಾಟಕ ವಾರ್ತೆ): ಏಡ್ಸ್ ರೋಗವು ಎಚ್‌ಐವಿ ವೈರಸ್‌ನಿಂದ ಬರುವ ಕಾಯಿಲೆಯಾಗಿದ್ದು, ಈ ವೈರಸ್ ಮನುಷ್ಯನ ದೇಹದಲ್ಲಿ ಮಾತ್ರ ಬದುಕುತ್ತದೆ. ಏಡ್ಸ್ಗೆ ಔಷಧಿ ಇಲ್ಲವಾದ್ದರಿಂದ ಈ ರೋಗ ಹರಡುವ ವಿಧಾನಗಳ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಅವರು ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿಗಳ ನೂತನ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೆಡ್ ರಿಬ್ಬನ್ ಕ್ಲಬ್ಸ್, ರೆಡ್‌ಕ್ರಾಸ್ ಸಂಸ್ಥೆ, ವಿಹಾನ್, ಶಾರದಾ ಪ್ಯಾರಾ ಮೆಡಿಕಲ್ ಕಾಲೇಜು, ಕಲ್ವಾರಿ ಚಾಪೆಲ್ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್, ರೋಟರಿ ಸಂಸ್ಥೆ, ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಜಾಥಾ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಎಚ್‌ಐವಿ ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತವಾಗಿ ಲೈಂಗಿಕ ಸಂಪರ್ಕ ಹೊಂದಿದಾಗ ಈ ವೈರಸ್ ಹೆಚ್ಚಾಗಿ ಹರಡುತ್ತದೆ. ಎಚ್‌ಐವಿ ರೋಗಿಯೊಂದಿಗೆ ಕೈಕುಲುಕುವುದರಿಂದ, ಜೊತೆಯಲ್ಲಿ ಊಟ ಮಾಡುವುದರಿಂದ, ಸೋಂಕಿತರನ್ನು ಆರೈಕೆ ಮಾಡುವುದರಿಂದ ಹರಡುವುದಿಲ್ಲ. ಸಂವಿಧಾನದ ಅನುಚ್ಛೇದ ೨೧ರ ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಗೌರವದಿಂದ ಜೀವನ ನಡೆಸುವ ಹಕ್ಕು ಇದೆ. ಅದರಂತೆ ಏಡ್ಸ್ ರೋಗಿಗಳಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ. ಏಡ್ಸ್ ಪೀಡಿತ ರೋಗಿಗಳಿಗೆ ಉಚಿತ ಕಾನೂನು ನೆರವು ಲಭ್ಯವಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎಸ್ ಪಾಟೀಲ್ ಅವರು ಮಾತನಾಡಿ, ಪ್ರತಿ ವರ್ಷ ಡಿಸೆಂಬರ್ ೧ರಂದು ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. “ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ” ಎಂಬುದು ಈ ವರ್ಷದ ದಿನಾಚರಣೆಯ ಘೋಷಣೆಯಾಗಿದೆ. ಏಡ್ಸ್ ರೋಗವನ್ನು ಸೊನ್ನೆಗೆ ತರುವಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ, ತಿಳಿವಳಿಕೆ ಮೂಡುವುದು ಮುಖ್ಯವಾಗಿದೆ ಎಂದು ಹೇಳಿದರು.
ಬೇಕು ಅಂದ್ರೆ ಮಾತ್ರ ಬರುವ ಕಾಯಿಲೆ!: ಸಾಂಕ್ರಾಮಿಕ ರೋಗಗಳು ಸೊಳ್ಳೆ ಕಚ್ಚುವ ಮೂಲಕ ಅಥವಾ ಗಾಳಿಯಿಂದ ಹರಡುತ್ತವೆ. ಆದರೆ, ಏಡ್ಸ್ ರೋಗ ಹಾಗಲ್ಲ. ಬೇಕು ಎಂದು ಬಯಸಿದರೆ ಮಾತ್ರ ಬರುವ ಕಾಯಿಲೆಯಾಗಿದೆ! ರೋಗ ಬಂದ ನಂತರ ಔಷಧವಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಏಕಪತ್ನಿ/ ಏಕಪತಿ ವ್ರತ ಆಚರಿಸುವ ಮೂಲಕ ಏಡ್ಸ್ನಿಂದ ದೂರವಿರಿ ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.
ಜಿಲ್ಲಾ ಅಂಧತ್ವ ಮತ್ತು ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ವಿಶೇಷ ಉಪನ್ಯಾಸ ನೀಡಿ, ಎಚ್‌ಐವಿ ವೈರಸ್ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ಬಿಳಿರಕ್ತ ಕಣಗಳನ್ನು ನಾಶ ಮಾಡಿ ದೇಹದ ರಕ್ಷಣಾ ವ್ಯವಸ್ಥೆಯನ್ನು ನಾಶ ಮಾಡುತ್ತದೆ. ರೋಗಿಯ ತೂಕವು ೧ ತಿಂಗಳಲ್ಲಿ ಶೇ.೧೦ರಷ್ಟು ಕಡಿಮೆ ಆಗುತ್ತದೆ. ಒಂದು ತಿಂಗಳಿಗಿAತ ಹೆಚ್ಚು ಕಾಲದ ಬೇಧಿ, ಸತತವಾದ ಜ್ವರ ರೋಗದ ಲಕ್ಷಣಗಳಾಗಿವೆ. ಚಿಕಿತ್ಸೆಯಿಂದ ರೋಗಿಯ ಮರಣ ದಿನಾಂಕವನ್ನು ಮುಂದೂಡಬಹುದೇ ಹೊರತು ಸಂಪೂರ್ಣ ಗುಣಮುಖ ಸಾಧ್ಯವಿಲ್ಲ ಎಂದು ತಿಳಿಸಿದರು.
ಎಚ್‌ಐವಿ ಸೋಂಕಿತರಿಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸಿಟಿಸಿ ಕೇಂದ್ರಗಳಿವೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಆಪ್ತಸಮಾಲೋಚನೆ ಹಾಗೂ ಎಚ್‌ಐವಿ ಪರೀಕ್ಷೆ ಮಾಡಲಾಗುವುದು. ಕರ್ನಾಟಕ ರಾಜ್ಯದಾದ್ಯಂತ ಎಚ್‌ಐವಿ/ ಏಡ್ಸ್ ನಿಯಂತ್ರಣ ಮತ್ತು ತಡೆ ಕಾಯ್ದೆ-೨೦೧೭ ಜಾರಿಗೊಳಿಸಲಾಗಿದೆ. ಎಚ್‌ಐವಿ ಸೋಂಕಿತರನ್ನು ತಾರತಮ್ಯದಿಂದ ನೋಡಿದರೆ ೧ ಲಕ್ಷ ರೂ. ದಂಡ ಹಾಗೂ ೨ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆಯುಷ್ಮಾನ್ ಕಾರ್ಡ್ ಪಡೆಯಿರಿ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ ಮತ್ತು ಹೊಂದಿರದ ಕುಟುಂಬಗಳು ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಪ್ರತಿಯೊಬ್ಬರು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ೧೦ ರೂ. ಶುಲ್ಕ ಪಾವತಿಸಿ ನೋಂದಾಯಿಸಿಕೊAಡು ಯೋಜನೆಯ ಲಾಭ ಪಡೆಯುವಂತೆ ಅವರು ಈ ಸಂದರ್ಭದಲ್ಲಿ ಕೋರಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದಡಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಾದ ಗುಂಡುರಾವ್ ಶಹಾಪುರ, ಮೊಹಮ್ಮದ್ ಮೌಲಾಲಿ ವಡಗೇರಾ, ಸಂಗಮೇಶ ಶಹಾಪುರ, ವೆಂಕಟಮ್ಮ ಯಾದಗಿರಿ, ಅನಿತಾ ಯಾದಗಿರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯರಾದ ಸಿ.ಎಸ್.ಮಾಲಿಪಾಟೀಲ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಗುರುರಾಜ ಹಿರೇಗೌಡ್ರು, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಆರತಿ ಧನಶ್ರೀ ಅವರು ಉಪಸ್ಥಿತರಿದ್ದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್ ಅವರು ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಏಡ್ಸ್ ದಿನಾಚರಣೆಯ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...