ಸೋಮವಾರ, ಡಿಸೆಂಬರ್ 9, 2019

“ಸಂವಿಧಾನ ಓದು” ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ
ಪ್ರತಿಯೊಬ್ಬರೂ ಸಂವಿಧಾನ ಓದಿ ಅರ್ಥೈಸಿಕೊಳ್ಳಿ
                                                     -ನ್ಯಾ. ಶ್ರೀ ಹೆಚ್.ಎನ್.ನಾಗಮೋಹನದಾಸ
ಯಾದಗಿರಿ, ಡಿಸೆಂಬರ್ ೦೯ (ಕರ್ನಾಟಕ ವಾರ್ತೆ): ಪ್ರಸ್ತುತ ಸಮಾಜದಲ್ಲಿ ಸಂವಿಧಾನವನ್ನು ಓದಿ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳುವ ಜೊತೆಗೆ ಅದರಲ್ಲಿನ ಅಂಶಗಳನ್ನು ಜಾರಿ ಮಾಡುವ ಅಥವಾ ಸಂವಿಧಾನದ ಆಶಯದಂತೆ ನಡೆದುಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯದ ಗೌರವಾನ್ವಿತನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಎನ್.ನಾಗಮೋಹನದಾಸ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಸಮುದಾಯ ಕರ್ನಾಟಕ ಮತ್ತು ಸಹಯಾನ ಕೆರೆಕೋಣ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.ನಮ್ಮ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಹತ್ತು ಬಾರಿ ಓದಿದರೂ ಬೇಗ ಅರ್ಥವಾಗುವುದಿಲ್ಲ. ಕಾರಣ, ಅದೊಂದು ಕಥೆ, ಕಾದಂಬರಿ ಅಥವಾ ಕವಿತೆಯಲ್ಲ. ಅದೊಂದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮವಾಗಿದೆ. ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ, ಪ್ರಸ್ತುತತೆ ತಿಳಿದಿರಬೇಕು. ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದ ಹೊರತು, ಸಂವಿಧಾನ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳದಿದ್ದರೆ, ಅದರ ಮೂಲತತ್ವಗಳು ತಿಳಿಯುವುದಿಲ್ಲ ಎಂದು ತಿಳಿಸಿದರು. ನಮ್ಮ ಸಂವಿಧಾನ ಅನುಷ್ಠಾನಕ್ಕೆ ಬಂದು ೬೯ ವರ್ಷಗಳು ಕಳೆದರೂ ಪ್ರಸ್ತುತವಾಗಿದೆ. ಸಂವಿಧಾನದ ಮೂಲ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುತ್ತವೆ. ಆದರೆ, ದೇಶದ ಬಹುಪಾಲು ಜನ ಸಂವಿಧಾನವನ್ನು ಓದಲಿಲ್ಲ. ಸರ್ಕಾರಗಳು ಕೂಡ ಸಂವಿಧಾನದ ಕಾರ್ಯಗಳನ್ನು ತಿಳಿಸಿಲ್ಲ. ಆದ್ದರಿಂದ, ನಾವೆಲ್ಲರೂ ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ, ಅದರಂತೆ ನಡೆದುಕೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಸವಾಲುಗಳನ್ನು ಹಿಮ್ಮೆಟ್ಟಿಸಬಹುದು ಎಂದು ಹೇಳಿದರು.
ಬಹು ರಾಷ್ಟಿಯ ಕಂಪನಿಗಳು ಮೊದಲಿಗೆ ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಕಾಲಕ್ರಮೇಣ ನಮಗೆ ಏನು ಶಿಕ್ಷಣ ಕೊಡಬೇಕು? ನಾವೇನು ತಿನ್ನಬೇಕು? ಎಂದು ಈಗಿನ ಜನರ ಮನಸ್ಸನ್ನು ನಿಯಂತ್ರಿಸುತ್ತಿವೆ. ಸರ್ಕಾರದ ನೀತಿಗಳನ್ನು ರೂಪಿಸುವಲ್ಲಿಯೂ ಪ್ರಭಾವ ಬೀರುತ್ತಿವೆ. ಸರ್ಕಾರಗಳು ಕಲ್ಯಾಣ ರಾಜ್ಯದ ಕಲ್ಪನೆಗಳನ್ನು ಮರೆಯುತ್ತಿವೆ. ಯಾವ ಪಕ್ಷವಾದರೂ ಅಧಿಕಾರಕ್ಕೆ ಬರಲಿ. ಸಂವಿಧಾನದAತೆ ನಡೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ರಾಜಕಾರಣಿಗಳಿಗೇಕೆ ಸಿ.ಇ.ಟಿ ಇಲ್ಲ?: ಐಎಎಸ್, ಐಪಿಎಸ್ ಹಿಡಿದು ಒಂದು ಸಣ್ಣ ಹುದ್ದೆಗೂ ಸಿಇಟಿ ಇದೆ. ಆದರೆ, ರಾಜ್ಯವನ್ನು ಮುನ್ನಡೆಸುವ ರಾಜಕಾರಣಿಗಳಿಗೆ ಏಕೆ ಸಿ.ಇ.ಟಿ ಇಲ್ಲ? ಎಂಬುದಾಗಿ ವಿದ್ಯಾರ್ಥಿಯೊಬ್ಬರು ಸಂವಾದದಲ್ಲಿ ಪ್ರಶ್ನಿಸಿದರು.ನ್ಯಾಯಮೂರ್ತಿಗಳಾದಶ್ರೀ ಹೆಚ್.ಎನ್.ನಾಗಮೋಹನದಾಸ ಅವರು ಮಾತನಾಡಿ, ದೇಶದ ಸಂಸದರೆಲ್ಲರೂ ಅಕ್ಷರಸ್ಥರೇ ಆಗಿದ್ದಾರೆ. ಇವರಲ್ಲಿ ಶೇ.೭೪ರಷ್ಟು ಜನ ಉನ್ನತ ಪದವಿಧರರು. ಆದರೆ, ಚರ್ಚೆಗಳಾಗದೇ ಕರಡು ಮಸೂದೆ ಪಾಸಾಗುತ್ತವೆ. ಇವರಲ್ಲಿ ಶೈಕ್ಷಣಿಕ ಅರ್ಹತೆಗಿಂತ ರಾಜ್ಯವನ್ನು ಮುನ್ನಡೆಸುವ ಸಾಮರ್ಥ್ಯದ ಜೊತೆಗೆ ಕಾಳಜಿ ಇರಬೇಕು ಎಂದು ಉತ್ತರಿಸಿದರು. ಗ್ರಾಮೀಣ ಜನರು ಅಕ್ಷರದ ಜ್ಞಾನ ಇಲ್ಲದಿದ್ದರೂ ರಾಮಾಯಣ, ಮಹಾಭಾರತವನ್ನು ಅಕ್ಷರಸ್ಥರಿಗಿಂತ ಹೆಚ್ಚಾಗಿ ತಿಳಿದುಕೊಂಡಿದ್ದಾರೆ. ಅದರಂತೆ ಕಥೆ, ಹಾಡು, ನಾಟಕಗಳ ಮೂಲಕ ಸಂವಿಧಾನವನ್ನು ಅವರಿಗೆ ತಿಳಿಸಬಹುದು ಎಂಬುದಾಗಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವು ಲಿಖಿತ ಮತ್ತು ವಿಶ್ವದಲ್ಲಿಯೇ ಅತಿದೊಡ್ಡ ಸಂವಿಧಾನವಾಗಿದೆ. ಕಲಂ ೧೫ರ ಪ್ರಕಾರ ಯಾವುದೇ ನಾಗರಿಕರ ವಿರುದ್ಧ ಜನಾಂಗ, ಧರ್ಮ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅವರ ರಕ್ಷಣೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾದೇಶಿಕ ಸಮತೋಲನೆಗಾಗಿ ಸಂವಿಧಾನದ ಕಲಂ ೩೭೧ (ಜೆ) ಜಾರಿಗೆ ತರಲಾಗಿದೆ. ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಪರಿಹಾರಗಳಿದ್ದು, ಅವುಗಳನ್ನು ಪ್ರಶ್ನೆ ಮಾಡಿ ತಿಳಿದುಕೊಳ್ಳುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.
ಸಮುದಾಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೇವಿಂದ್ರಪ್ಪಗೌಡ ಅವರು ಮಾತನಾಡಿ, ವಿದ್ಯಾರ್ಥಿ ಯುವಜನರಿಗಾಗಿ ಸಂವಿಧಾನ ಓದು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಆಯೋಜಿಸಲಾಗುತ್ತಿದೆ. “ಸಂವಿಧಾನ ಓದು” ಪುಸ್ತಕವು ೩೩ನೇ ಮುದ್ರಣ ಕಂಡು ೭೫ ಸಾವಿರ ಪ್ರತಿಗಳು ಮಾರಾಟವಾಗಿವೆ. ಇಂಗ್ಲಿಷ್ ಭಾಷೆಯಲ್ಲೂ ಪುಸ್ತಕ ಲಭ್ಯ ಇದೆ. ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ತರ್ಜುಮೆಯಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಸಂವಿಧಾನ ಅಂದರೇನು? ಅದರ ಪ್ರಮುಖ ಅಂಶಗಳೇನು? ನಾವು ಅವುಗಳನ್ನು ಏಕೆ ತಿಳಿದುಕೊಳ್ಳಬೇಕು? ಎಂಬುದನ್ನು ಸರಳವಾಗಿ ವಿವರಿಸಲಾಗಿದೆ ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಅಖಿಲ ಭಾರತ ವಕೀಲರ ಸಂಘದ ಕೆ.ಆರ್.ವೆಂಕಟೇಶಗೌಡ ಅವರು ಮಾತನಾಡಿದರು.ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಶಿವನಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ನಾಮದೇವ ಕೆ.ಸಾಲಮಂಟಪಿ, ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಧನಪಾಲ ಹವಲೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸ್ಮೀತಾ ಮಾಲಗಾಂವೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಕ್ಯಾತನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚನ್ನಬಸವ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಎಸ್. ಮಾಲಿಪಾಟೀಲ್ ಅವರು ಉಪಸ್ಥಿತರಿದ್ದರು.ಶ್ರೀ ಪುಟ್ಟರಾಜು ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಕೀಲರಾದ ಎಸ್.ಪಿ.ನಾಡೇಕರ್ ಅವರು ಸ್ವಾಗತಿಸಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಬಿ.ಜಿ.ಪಾಟೀಲ್ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...