ಮಂಗಳವಾರ, ಡಿಸೆಂಬರ್ 24, 2019

ಸರ್ಕಾರದ ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
ರಾಜ್ಯ ಸರ್ಕಾರದಿಂದ ಜನಪರ ಯೋಜನೆಗಳ ಅನುಷ್ಠಾನ
-ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ
ಯಾದಗಿರಿ, ಡಿಸೆಂಬರ್ ೨೪ (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬಡ ಹಾಗೂ ಮಧ್ಯಮ ವರ್ಗದವರು ಸೇರಿದಂತೆ ಸರ್ವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರಕಾರವು ನೂರು ದಿನಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ನೆರೆ ಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ಡಿ.೨೪ರಿಂದ ಮೂರು ದಿನಗಳ ವರೆಗೆ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನರೆವಿಗೆ ಸರ್ಕಾರ ಕೂಡಲೇ ಧಾವಿಸಿ, ಅವರಿಗೆ ಸಹಾಯ ಹಸ್ತ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ಜನರ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಕಲ್ಯಾಣವೇ ಸರ್ಕಾರದ ಧ್ಯೇಯ ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಬೇಕೆನ್ನುವುದು ಗುರಿಯಾಗಿದ್ದು, ಈ ಭಾಗದಲ್ಲಿ ಅಪೌಷ್ಟಿಕತೆ ನಿವಾರಣೆ ಮತ್ತು ಶಿಕ್ಷಣ ಫಲಿತಾಂಶ ಉತ್ತಮಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಧಾನಮಂತ್ರಿಯವರು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ೫ ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದ್ದಾರೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಛಾಯಾಚಿತ್ರ ಪ್ರದರ್ಶನದಲ್ಲಿರುವ ವಿವರ: ಪ್ರವಾಹದಲ್ಲಿ ತೊಂದರೆಗೊಳಗಾದ ಕುಟುಂಬಗಳಿಗೂ ತಲಾ ೧೦,೦೦೦ ರೂ. ಪರಿಹಾರ ನೀಡಲಾಗಿದ್ದು, ೧೦೪ ಜನರ ಜೀವಹಾನಿಯಾಗಿರುವುದರಿಂದ ತಲಾ ೫ ಲಕ್ಷ ರೂ. ಮತ್ತು ಅಸುನೀಗಿದ ಜಾನುವಾರುಗಳಿಗೆ ೧೬ ರಿಂದ ೩೦ ಸಾವಿರ ರೂ. ಪರಿಹಾರ ನೀಡಲಾಗಿರುವ ಛಾಯಾಚಿತ್ರ. ಸಂಪರ್ಕ ಕಳೆದುಕೊಂಡಿದ್ದ ೧೭೮ ರಸ್ತೆ, ಸೇತುವೆಗಳ ಪೈಕಿ ೧೪೨ ರಸ್ತೆ, ಸೇತುವೆ ಸಂಪರ್ಕಗಳ ಪುನರ್ ಸ್ಥಾಪನೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಕಾಮಗಾರಿ ಕೈಗೊಳ್ಳಲು ೧೫೦೦ ಕೋಟಿ ರೂ. ಬಿಡುಗಡೆ ಮಾಡಿರುವ ಕುರಿತ ಮಾಹಿತಿ ಪ್ರದರ್ಶನದಲ್ಲಿದೆ.
ಪ್ರವಾಹ ಸಂತ್ರಸ್ಥರ ನೋವಿಗೆ ಮಿಡಿದ ಸರ್ಕಾರ ೨೨ ಜಿಲ್ಲೆಗಳ ೧೦೩ ತಾಲೂಕು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಿ ಕೆಂದ್ರ ಸರ್ಕಾರದಿಂದ ೧೨೦೦ ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆಗೊಳಿಸಿ, ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯಗಳಿಗೆ ೬.೪೫೦ ಕೋಟಿ ರೂ. ಮಂಜೂರು ಮಾಡಿರುವ ಬಗ್ಗೆ.
ಅನ್ನದಾತ ರೈತನ ಹಿತರಕ್ಷಣೆ ಸರಕಾರದ ಮೊದಲ ಆದ್ಯತೆಯಾಗಿದ್ದು, ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ವಾರ್ಷಿಕ ೬,೦೦೦ ರೂ. ನೆರವಿನೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ೪,೦೦೦ ರೂ.ಗಳ ನೆರವು. ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಮೊದಲ ಕಂತಿನ ತಲಾ ೨,೦೦೦ ರೂ.ಗಳನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುವ ಬಗ್ಗೆ.
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ರಚನೆ ಮಾಡಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ೨೦೭ ಅಂಗನವಾಡಿ ಕಟ್ಟಡಗಳ ನಿರ್ಮಾಣ ಮತ್ತು ೧೦೦೦ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ೧೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ಮಾತೃವಂದನಾ ಯೋಜನೆಯಡಿ ೩ ಕಂತುಗಳಲ್ಲಿ ೫೦೦೦ ರೂ. ಸಹಾಯಧನ, ೯೭೨೪೬ ಫಲಾನುಭವಿಗಳೀಗೆ ಪ್ರಯೋಜನ ೪೪.೬೫ ಕೋಟಿ ರೂ. ನೆರವು ನೀಡಲಾಗಿದೆ. ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ೪೨೭ ಕೋಟಿ ರೂ. ವೆಚ್ಚ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ ೨೫೧ ಕೋಟಿ ರೂ. ವೆಚ್ಚ ಮಾಡಲಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಈ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣ ಸೃಷ್ಟಿ ಮಾಡಲಾಗುವುದೆನ್ನುವ ಛಾಯಾಚಿತ್ರ.
ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿಯವರ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಕಾರ್ಯಪಡೆ. ಸುಸ್ಥಿರ ಹಾಗೂ ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದ ಆದ್ಯತೆ ಆಗಿದೆ. ಹೈದ್ರಾಬಾದ್ ಕರ್ನಾಟಕ ಭಾಗವನ್ನು “ಕಲ್ಯಾಣ ಕರ್ನಾಟಕ”ವೆಂದು ಮರು ನಾಮಕರಣ. ಇದರಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಮತ್ತು ಜನ ಕಲ್ಯಾಣದ ಪರ್ವಕ್ಕೆ ಚಾಲನೆ. ಕಲ್ಯಾಣ ಕರ್ನಾಟಕ ಭಾಗದ ೨೧ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಲಬುರಗಿಗೆ ವಿಮಾನ ಸೇವೆ ಪ್ರಾರಂಭ ಮತ್ತು ಪ್ರವಾಸೋದ್ಯಮ, ವಾಣಿಜೋದ್ಯಮ, ರಫ್ತು ಉದ್ಯಮಗಳ ಬೆಳವಣಿಗೆಗೆ ಪ್ರಯೋಜನವಾಗಲಿ ಎನ್ನುವ ಛಾಯಾಚಿತ್ರಗಳಿವೆ.
ಶಿಕ್ಷಕರ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಲು ಗುರುಚೇತನ ತರಬೇತಿ ನೀಡಿದೆ. ಪ್ರಥಮ ಬಾರಿಗೆ ೧೫೫ ವಿಕಲಚೇತನರ ಶಾಲೆಯ ೧೦ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಪೌಷ್ಟಿಕಾಂಶಯುಕ್ತ ಹಾಲು ಪೂರೈಕೆ ಮಾಡಿರುವ ಕುರಿತು.
ಸಂಕಷ್ಟಕ್ಕೆ ಒಳಗಾಗಿರುವ ನೇಕಾರರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ಒಟ್ಟು ೯೮.೨೯ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿAದ ಮೀನುಗಾರರು ಪಡೆದಿರುವ ೫೦ ಸಾವಿರ ರೂ. ವರೆಗಿನ ಸಾಲ ಮನ್ನಾ. ರಾಜ್ಯದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ ೨೩ ಲಕ್ಷ ಆರೋಗ್ಯ ಕಾರ್ಡ ವಿತರಣೆ ಮಾಡಿರುವ ಕುರಿತ ಮಾಹಿತಿಯ ಜೊತೆಗೆ ಸರ್ಕಾರ ಅನೇಕ ಜನಪರ ಯೋಜನೆಗಳ ವಿವರ ಛಾಯಾಚಿತ್ರ ಪ್ರದರ್ಶನದಲ್ಲಿದೆ.
೨೬ರ ವರೆಗೆ ಉಚಿತ ಪ್ರದರ್ಶನ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಸರ್ಕಾರದ ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವು ಡಿ.೨೬ರ ಗುರುವಾರ ಸಂಜೆ ೫.೩೦ರ ವರೆಗೆ ಇರುತ್ತದೆ. ಪ್ರವೇಶ ಉಚಿತವಿದ್ದು, ಜಿಲ್ಲೆಯ ನಾಗರಿಕರೆಲ್ಲರೂ ವೀಕ್ಷಿಸಬಹುದಾಗಿದೆ.
ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರಾದ ಪರಮರೆಡ್ಡಿ ಕಂದಕೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಡಿ.ಕೆ.ರಾಜರತ್ನ, ವಾರ್ತಾ ಇಲಾಖೆಯ ಬೆರಳಚ್ಚುಗಾರ ವಿಶ್ವರಾಧ್ಯ ಎಸ್.ಹಂಗನಳ್ಳಿ, ಸಾರಿಗೆ ಸಂಸ್ಥೆಯ ಸಿಬ್ಬಂದಿ, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸ್ಪೆಕ್ಟçಂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...