ಸ್ನೇಹಾ ತಂತ್ರಾ0ಶ ಬಳಕೆ ಕುರಿತು ಎರಡು ದಿನಗಳ ಕಾರ್ಯಾಗಾರ
ಶಿಶು ಅಭಿವೃದ್ಧಿ ಸೇವೆ ಪರಿಣಾಮಕಾರಿಗೆ ಸ್ನೇಹಾ ತಂತ್ರಾ0ಶ
-:ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಡಿಸೆಂಬರ್ ೦೩ (ಕರ್ನಾಟಕ ವಾರ್ತೆ): ಅಂಗನವಾಡಿ ಕೇಂದ್ರಗಳಲ್ಲಿ ಕಲ್ಪಿಸಲಾಗುತ್ತಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು “ಸ್ನೇಹಾ” ತಂತ್ರಾ0ಶ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಈ ತಂತ್ರಾ0ಶವನ್ನು ಅಳವಡಿಸುವುದರಿಂದ ಏಕರೂಪದ ಮಾಹಿತಿಯನ್ನು ಕಲೆ ಹಾಕಬಹುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಿ ಸ್ಟೆಪ್ ಸಂಸ್ಥೆ ಸಹಯೋಗದಲ್ಲಿ ಸ್ನೇಹಾ ತಂತ್ರಾ0ಶ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನಾವಾಡಿ ಮೇಲ್ವಿಚಾರಕಿಯರಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ದಾಖಲಾತಿ ಪುಸ್ತಕಗಳನ್ನು ನಿರ್ವಹಿಸುತ್ತಾರೆ. ಸುಮಾರು ೨೪ ದಾಖಲಾತಿ ಪುಸ್ತಕವಿದ್ದರೆ ದಿನಕ್ಕೊಂದು ದಾಖಲಾತಿ ನಿರ್ವಹಣೆ ಮಾಡುವುದರಲ್ಲಿಯೆ ಸಮಯ ಕಳೆಯಬೇಕಾಗುತ್ತದೆ. ಮತ್ತು ದಿನಕ್ಕೊಂದು ಕಾರ್ಯಕ್ರಮಗಳನ್ನು ಏರ್ಪಡಿಸಿದಾಗ ಅವರು ಅದರಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಆದ್ದರಿಂದ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು ಇರುವಲ್ಲಿಗೆ ಹೋಗಬೇಕು. ಇಂತಹ ಸಮಸ್ಯೆಗಳನ್ನು ತಂತ್ರಾAಶಗಳ ಮೂಲಕ ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.
ನೀತಿ ಆಯೋಗವು ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳನ್ನು ಇಟ್ಟುಕೊಂಡು ಹಿಂದುಳಿದ ೧೧೫ ಜಿಲ್ಲೆಗಳನ್ನು ಗುರುತಿಸಿದೆ. ಇವುಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆಯ್ಕೆಯಾಗಿವೆ. ಈ ನಿಟ್ಟಿನಲ್ಲಿ ಸ್ನೇಹಾ ತಂತ್ರಾ0ಶವನ್ನು ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಸಮನ್ವಯತೆ ಸಾಧಿಸುವುದು ಸ್ನೇಹಾ ತಂತ್ರಾ0ಶದ ಮೂಲ ಉದ್ದೇಶವಾಗಿದೆ. ಸ್ನೇಹಾ ತಂತ್ರಾ0ಶದ ಮೂಲಕ ಸರಿಯಾದ ಮಾಹಿತಿ ಪಡೆಯಬಹುದಾಗಿದೆ. ನಾವು ಉಪಯೋಗಿಸುವ ತಂತ್ರಾ0ಶಗಳಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ನಮ್ಮಲ್ಲಿಯೇ ಸಮಸ್ಯೆಗಳಿರುತ್ತವೆ. ಕೆಲಸವನ್ನು ಸುಲಭ ಮಾಡಲು ಈ ತಂತ್ರಾ0ಶವನ್ನು ರೂಪಿಸಲಾಗಿದೆ. ಇದನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ದಿನನಿತ್ಯ ಮಕ್ಕಳು ಹಾಗೂ ಗರ್ಭಿಣಿಯರ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈಗ ಸ್ನೇಹಾ ತಂತ್ರಾ0ಶದ ಮೂಲಕ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ತರಬೇತಿಯಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಈ ತಂತ್ರಾAಶದ ಉಪಯೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ಸಿ ಸ್ಟೆಪ್ ಸಂಸ್ಥೆಯ ರೂಪಾ ಅವರು ಮಾತನಾಡಿ, ಸ್ನೇಹಾ ತಂತ್ರಾ0ಶದ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಮಕ್ಕಳ ಹಾಗೂ ತಾಯಂದಿರ ಏಕರೂಪದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಮಕ್ಕಳ ಚುಚ್ಚುಮದ್ದು, ಗರ್ಭಿಣಿಯರ ಆರೈಕೆ ಹಾಗೂ ನೋಂದಣಿಗಳನ್ನು ದಾಖಲಿಸಲು ನೆರವಾಗಲಿದೆ. ಅಲ್ಲದೇ ಮಗುವಿನ ತೂಕ, ಉದ್ದ, ಎತ್ತರದ ಬಗ್ಗೆ ನಿಖರ ಮಾಹಿತಿ, ಭಾವಚಿತ್ರದ ಮೂಲಕ ಮಕ್ಕಳ ಹಾಜರಾತಿ ತಿಳಿಯಲು ಸಹಕಾರಿಯಾಗಿದೆ. ವೈದ್ಯಕೀಯ ಸೇವೆ ಅಗತ್ಯವಿರುವ ಮಕ್ಕಳ ಗುರುತಿಸುವಿಕೆ ಸಂಬ0ಧಿಸಿದ0ತೆ ಜಿಲ್ಲೆಯ ಮಾಹಿತಿಯನ್ನು ಏಕಕಾಲದಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸ್ನೇಹಾ ತಂತ್ರಾ0ಶ ಬಳಕೆಯಿಂದ ಅಂಗನವಾಡಿ ಕೇಂದ್ರಗಳಲ್ಲಿರುವ ಲೋಪದೋಷ, ನ್ಯೂನ್ಯತೆ, ಮೂಲಭೂತ ಸೌಕರ್ಯಗಳ ಕೊರತೆ ಅರಿತು ಅಗತ್ಯವಾದ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ನೆರವಾಗುತ್ತದೆ. ಸಿಬ್ಬಂದಿಗಳಿಗೆ ಸಲಹೆ- ಸೂಚನೆಗಳನ್ನು ನೀಡಲು ಕೂಡ ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು.
ಯಾದಗಿರಿ ಜಿಲ್ಲೆಯ ೧೨, ರಾಯಚೂರಿನ ೨೦, ಕಲಬರಗಿಯ ೨೪ ಹಾಗೂ ಬೀದರನ ೧೪ ಜನ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ನಂತರ ಇವರು ಅಂಗನವಾಡಿ ಮಟ್ಟದಲ್ಲಿ ಆಯ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಭಾಕರ ಕವಿತಾಳ್ ಅವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ