ಸಕಾಲ ಅರ್ಜಿಗಳ ವಿಲೆವಾರಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರಿಗೆ ಪ್ರಶಂಸಾ ಪತ್ರ
ಯಾದಗಿರಿ, ಡಿಸೆಂಬರ್ ೧೬ (ಕರ್ನಾಟಕ ವಾರ್ತೆ): ಸಕಾಲ ಅರ್ಜಿಗಳ ವಿಲೆವಾರಿಯಲ್ಲಿ ನವೆಂಬರ್- ೨೦೧೯ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕಾಲ ತಂಡದ ನಾಯಕರೂ ಆಗಿರುವ ಎಂ.ಕೂರ್ಮಾ ರಾವ್ ಅವರಿಗೆ ಕರ್ನಾಟಕ ಸರ್ಕಾರದಿಂದ ಪ್ರಶಂಸಾ ಪತ್ರವನ್ನು ನೀಡಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್.ಸುರೇಶ್‌ಕುಮಾರ್ ಅವರು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರಿಗೆ ಬೆಂಗಳೂರಿನಲ್ಲಿ ಪ್ರಶಂಸಾ ಪತ್ರವನ್ನು ಪ್ರದಾನ ಮಾಡಿ, ಅಭಿನಂದಿಸಿದರು. ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಕಾಲ ಮಿಷನ್ ನಿರ್ದೇಶಕರಾದ ರಾಜೀವ್ ಚಾವ್ಲಾ, ಸಕಾಲ ಮಿಷನ್ ಅಪರ ನಿರ್ದೇಶಕರುಗಳಾದ ಸುನೀಲ್ ಪನ್ವಾರ್, ವರಪ್ರಸಾದ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯಾದಗಿರಿ ಜಿಲ್ಲೆಯು ಸಕಾಲ ಅರ್ಜಿಗಳ ವಿಲೆಯಲ್ಲಿ ೫ನೇ ಸ್ಥಾನ, ಅರ್ಜಿಗಳ ಸ್ವೀಕೃತಿಯಲ್ಲಿ ೪ನೇ ಸ್ಥಾನ ಹೊಂದಿದ್ದು, ಒಟ್ಟಾರೆ ರಾಜ್ಯಮಟ್ಟದಲ್ಲಿ ಒಂದನೇ ಸ್ಥಾನದಲ್ಲಿರುತ್ತದೆ. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ- ೨೦೧೧ ತಿದ್ದುಪಡಿ ಅಧಿನಿಯಮ- ೨೦೧೪ರಡಿಯಲ್ಲಿ ರಾಜ್ಯ ಸರಕಾರದ ವಿವಿಧ ೯೧ ಇಲಾಖೆ, ಸಂಸ್ಥೆಗಳ ಒಟ್ಟು ೧,೦೩೩ ಸೇವೆಗಳ ಸಕಾಲ ಅಧಿನಿಯಮಕ್ಕೆ ಒಳಪಟ್ಟಿರುತ್ತವೆ. ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಕಂದಾಯ ಇಲಾಖೆ, ಗೃಹ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ, ಪಶುಸಂಗೋಪನೆ ಇಲಾಖೆಗ
ಳನ್ನು ಒಳಗೊಂಡು ಒಟ್ಟು ೫೮,೯೮೧ ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳಲ್ಲಿ ೫೭,೧೬೪ ಅರ್ಜಿಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೆಗೊಳಿಸಲಾಗಿರುತ್ತದೆ. ಜಿಲ್ಲೆಯ ನಾಗರಿಕರು ಸಕಾಲ ಅಧಿನಿಯಮದಡಿ ಒಳಪಡುವ ವಿವಿಧ ಇಲಾಖೆಗಳ ಸೇವೆಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಉಪಯೋಗ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ