ಸೋಮವಾರ, ಡಿಸೆಂಬರ್ 2, 2019

ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ

ಯಾದಗಿರಿ, ಡಿಸೆಂಬರ್ 02 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಡಿಸೆಂಬರ್ 2ರಿಂದ 2020ರ ಮಾರ್ಚ್ 10ರವರೆಗೆ ನಡೆಯಲಿರುವ ತೀವ್ರತರದ ಮಿಷನ್ ಇಂದ್ರಧನುಷ್ 2.0 ಅಭಿಯಾನದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಹೇಳಿದರು.

ಇಲ್ಲಿನ ಗಂಗಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಅವರು ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು.
ತೀವ್ರತರದ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ನಾಲ್ಕು ಸುತ್ತುಗಳಲ್ಲಿ ನಡೆಯಲಿದ್ದು, ಮೊದಲನೇ ಸುತ್ತು ಡಿಸೆಂಬರ್ 2ರಿಂದ 10ರವರೆಗೆ, ಎರಡನೇ ಸುತ್ತು ಜನವರಿ 3ರಿಂದ 10ರವರೆಗೆ, ಮೂರನೇ ಸುತ್ತು ಫೆಬ್ರುವರಿ 3ರಿಂದ 11ರವರೆಗೆ ಹಾಗೂ ನಾಲ್ಕನೇ ಸುತ್ತು ಮಾರ್ಚ್ 2ರಿಂದ 9ರವರೆಗೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರು ಮಾತನಾಡಿ, ಪೋಷಕರು ತಮ್ಮ ಮಗುವಿಗೆ 10 ಮಾರಕ ರೋಗಗಳ ವಿರುದ್ಧ ತಪ್ಪದೇ ಲಸಿಕೆ ನೀಡಬೇಕು. ಗರ್ಭಿಣಿಯರು ಸಹ ಟಿ.ಟಿ ಮತ್ತು ವರ್ಧಕ ಲಸಿಕೆಗಳನ್ನು ಹಾಕಿಸಿ ತಾಯಿ ಮತ್ತು ಮಗು ಆರೋಗ್ಯದಿಂದ ಇರಲು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, 0 ನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ ರೋಗ ಬಾರದಂತೆ ಎಚ್ಚರವಹಿಸಿ ಎಂದು ತಿಳಿಸಿದರು.
ಕಲಬುರಗಿಯ ವಿಭಾಗಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‍ಕುಮಾರ್ ಎಸ್.ತಾಳಿಕೋಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಮುಖ್ಯಗುರುಗಳಾದ ಪಯಾಜೈ ಅಹ್ಮದ್, ನಗರಸಭೆ ಸದಸ್ಯರಾದ ಮಾಶಪ್ಪ, ಡಾ.ಮಹ್ಮದ್ ನುಮಾನ್, ಯುನಿಸೆಫ್‍ನ ಕಿರಣ ಅಂಗಡಿ, ಎಲ್.ಎಚ್.ವಿ ಅರುಣಾ, ಎ.ಎಸ್.ಓ ನೀಲಮ್ಮ ಹಾಗೂ ಸಾರ್ವಜನಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಲಕ್ಷ್ಮೀಕಾಂತ ಅವರು ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್ ಅವರು ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...