ಬುಧವಾರ, ಡಿಸೆಂಬರ್ 4, 2019

ಜಾತ್ರಾ ಮಹೋತ್ಸವದಲ್ಲಿ ಕುರಿಮರಿ ಹಾರಿಸಿದರೆ ಕ್ರಿಮಿನಲ್ ಮೊಕದ್ದಮೆ
ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಜನವರಿ ತಿಂಗಳಲ್ಲಿ ಜರುಗುವ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಮೈಲಾಪುರ ಗ್ರಾಮದಲ್ಲಿ ಕುಡಿಯುವ ನೀರು, ಭಕ್ತರಿಗೆ ಸ್ನಾನದ ವ್ಯವಸ್ಥೆ ಹಾಗೂ ಸಾರಿಗೆ ಸೌಲಭ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಜಾತ್ರಾ ಮಹೋತ್ಸವಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಗ್ರಾಮದ ರಸ್ತೆಗಳ ವಿಸ್ತರಣೆ, ದುರಸ್ತಿ ಮಾಡಲು ಕ್ರಮವಹಿಸಬೇಕು. ಜಾತ್ರೆ ಸಂದರ್ಭದಲ್ಲಿ ವಾಹನ ದಟ್ಟಣೆಯಾಗಿ ಭಕ್ತರಿಗೆ ಓಡಾಡಲು ಸಮಸ್ಯೆಯಾಗಬಹುದು. ಹಾಗಾಗಿ, ಏಕಮುಖ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು. ಬೇರೆ ರಾಜ್ಯಗಳಿಂದ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಯಾದಗಿರಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಅವರು ಹೇಳಿದರು.
ಜಾತ್ರೆಯಲ್ಲಿ ಭಕ್ತರ ಹಿತಾಸಕ್ತಿ ಕಾಪಾಡಲು ಸ್ಥಳೀಯ ಸ್ವಯಂಸೇವಕರನ್ನು ನೇಮಿಸಿ. ಮೈಲಾಪುರ ಗ್ರಾಮದ ಇಡೀ ನಕ್ಷೆಯನ್ನು ತಯಾರಿಸಿ ಅಂಗಡಿ-ಮುAಗಟ್ಟು, ಬಸ್ ನಿಲ್ದಾಣ, ವಸ್ತು ಪ್ರದರ್ಶನ, ಚೆಕ್‌ಪೋಸ್ಟ್, ತೆಂಗಿನ ಕಾಯಿ ಒಡೆಯುವ ಸ್ಥಳ ಮುಂತಾದವುಗಳನ್ನು ಈಗಲೇ ಗುರುತಿಸಬೇಕು. ಸಂಬAಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ಕುರಿಮರಿ ಹಾರಿಸಿದರೆ ಕ್ರಿಮಿನಲ್ ಮೊಕದ್ದಮೆ: ಜಾತ್ರೆಯಲ್ಲಿ ಕುರಿಮರಿ ಹಾರಿಸುವ ವಾಡಿಕೆ ಇದೆ. ಇದನ್ನು ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ೧೯೬೦ರಂತೆ ಕುರಿಮರಿ ಹಾರಿಸುವುದನ್ನು ತಡೆಗಟ್ಟಲು ಹಾಗೂ ಕಣ್ತಪ್ಪಿಸಿ ಕುರಿಮರಿಗಳನ್ನು ಹಾರಿಸುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ಬಾರಿಯಂತೆ ದ್ರೋಣ್ ಕ್ಯಾಮೆರಾಗಳ ಮೂಲಕ ಎಲ್ಲಾ ಕಾರ್ಯಕ್ರಮಗಳ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಮುಖವಾಗಿ ಕುರಿಮರಿಗಳನ್ನು ಹಾರಿಸುವ ಚಟುವಟಿಕೆಯಲ್ಲಿ ತೊಡಗಿರುವುದು ಯಾರಾದರೂ ಕಂಡುಬAದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕುರಿಮರಿಗಳ ಹಾರಾಟ ತಪ್ಪಿಸಲು ಮೈಲಾಪುರ ಗ್ರಾಮದ ಸುತ್ತಮುತ್ತ ಒಟ್ಟು ೬ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ, ಇವುಗಳಲ್ಲಿ ಪೊಲೀಸ್, ಕಂದಾಯ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಅವರು ನಿರ್ದೇಶಿಸಿದರು.
ಪ್ಲಾಷ್ಟಿಕ್ ನಿಷೇಧ: ಜಾತ್ರೆಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಮತ್ತಿತರ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ಬಗ್ಗೆ ಜಾತ್ರೆಯಲ್ಲಿ ಸ್ಥಾಪಿಸುವ ಅಂಗಡಿ ಮಾಲೀಕರಿಗೆ ಮೊದಲೇ ಮಾಹಿತಿ ನೀಡಿ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ಅವುಗಳನ್ನು ವಶಪಡಿಸಿಕೊಂಡು ಪರ್ಯಾಯವಾಗಿ ಬಟ್ಟೆ ಅಥವಾ ನಾರಿನ ಉತ್ಪನ್ನದ ಚೀಲಗಳನ್ನು ಅದರ ದರ ಪಡೆದು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಮೈಲಾಪುರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂತರಾಜ್ಯ ವಾಹನಗಳ ಪರವಾನಗಿ ಕಡ್ಡಾಯ: ಮಹಾರಾಷ್ಟç, ತೆಲಂಗಾಣ, ಆಂಧ್ರಪದೇಶ ಮುಂತಾದ ಹೊರರಾಜ್ಯಗಳಿಂದ ಬರುವ ಭಕ್ತಾಧಿಗಳು ತಮ್ಮ ಟೆಂಪೋ ಇನ್ನಿತರ ವಾಹನಗಳಿಗೆ ಆಯಾ ರಾಜ್ಯದ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದ ಪರವಾನಗಿ ಪ್ರಮಾಣ ಪತ್ರವನ್ನು ಜೊತೆಯಲ್ಲಿ ತರಬೇಕು. ಈ ಸಂಬAಧ ಹೊರರಾಜ್ಯಕ್ಕೆ ತೆರಳುವ ಬಸ್‌ಗಳ ಮೇಲೆ ಈಗಿನಿಂದಲೇ ಭಿತ್ತಿಪತ್ರ ಅಂಟಿಸಿ ಹೊರರಾಜ್ಯದ ಭಕ್ತರಿಗೆ ಜಾಗೃತಿ ಮೂಡಿಸಲು ತಿಳಿಸಿದರು.
ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‌ಪಿ ಯು.ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಅಬಕಾರಿ ಇಲಾಖೆಯ ಜಿಲ್ಲಾ ವಿಚಕ್ಷಣ ದಳದ ನಿರೀಕ್ಷಕರಾದ ಕೇದಾರನಾಥ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾಲನಾ ಅಧಿಕಾರಿ ಮಹಿಪಾಲ ಬೇಗಾರ, ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...