ಸೋಮವಾರ, ಡಿಸೆಂಬರ್ 2, 2019

“ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ” ಕುರಿತು ಫೋನ್-ಇನ್ ಕಾರ್ಯಕ್ರಮ
೫ ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್ ಮಾಡಿಸಿ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಡಿಸೆಂಬರ್ ೦೨ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಪ್ರತಿಯೊಬ್ಬರೂ ಆಯುಷ್ಮಾನ್ ಕಾರ್ಡ್ಮಾಡಿಸಿ, ಯೋಜನೆಯ ಲಾಭ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ “ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ” ಯೋಜನೆಯ ಕುರಿತಂತೆ ಹಮ್ಮಿಕೊಂಡಿದ್ದ ನೇರ ಪೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಮಾತನಾಡಿದರು.
ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಯಾವುದೇ ಪಡಿತರ ಚೀಟಿ ಇಲ್ಲದಿರುವ ಕುಟುಂಬಗಳು ಎಪಿಎಲ್ ಕುಟುಂಬಗಳೆAದು ಪರಿಗಣಿಸಲಾಗುವುದು. ಎಬಿಎಆರ್‌ಕೆ ಕಾರ್ಡ್ ಪಡೆಯುವಾಗ ಸ್ವಯಂ ಘೋಷಣಾ ಪತ್ರದೊಂದಿಗೆ ಆಧಾರ್ ಮತ್ತು ಪಡಿತರ ಚೀಟಿ ನಕಲು ಪ್ರತಿ ಹಾಜರುಪಡಿಸಬೇಕು ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಬಡಜನರಿಗೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ೧೬೫೦ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯ ಇವೆ. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಶಿಫಾರಸಿನೊಂದಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಚಿಕಿತ್ಸೆ ಪಡೆಯಬಹುದು. ತುರ್ತು ಚಿಕಿತ್ಸೆಗಳಿಗೆ ಶಿಫಾರಸು ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಎಬಿಎಆರ್‌ಕೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ೧೪೫೫೫ ಹಾಗೂ ೧೮೦೦೪೨೫೮೩೩೦, ೧೮೦೦೪೨೫೨೬೪೬ ಉಚಿತ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಆರೋಗ್ಯಕ್ಕೆ ಸಂಬAಧಿಸಿದ ಯಾವುದೇ ವಿಷಯಗಳಿಗಾಗಿ ೧೦೪ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.
ಕಾರ್ಡ್ ವಿತರಣೆ ಎಲ್ಲಿ?: ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲ್ಲೂಕು ಆಸ್ಪತ್ರೆಗಳು, ವಡಿಗೇರಾ, ಸೈದಾಪೂರ, ಗುರುಮಠಕಲ್, ಅರಕೇರಾ ಬಿ., ಹುಣಸಗಿ, ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗರ ಆರೋಗ್ಯ ಕೇಂದ್ರಗಳಲ್ಲಿ ೧೦ ರೂ. ಶುಲ್ಕ ಪಡೆದು ನೀಡಲಾಗುವುದು. ಅಲ್ಲದೆ, ಸೇವಾಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡ್ಗೆ ೧೦ ರೂ. ಹಾಗೂ ಪ್ಲಾಸ್ಟಿಕ್ ಕಾರ್ಡ್ಗೆ ೩೫ ರೂ. ನೀಡಿ ಪಡೆದುಕೊಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ಗಳನ್ನು ಡಿಸೆಂಬರ್ ೨ರಿಂದ ನಿಗದಿತ ದಿನಾಂಕಗಳAದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳಿಗ್ಗೆ ೮ ಗಂಟೆಯಿAದ ಸಂಜೆಯವರೆಗೆ ವಿತರಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಗ್ರಾಮಗಳಲ್ಲಿ ನಿಗದಿತ ಒಂದು ದಿನ ಮುಂಚಿತವಾಗಿ ಡಂಗೂರ ಸಾರುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
೧೩ಕ್ಕೂ ಹೆಚ್ಚು ಕರೆ ಸ್ವೀಕಾರ: ನೇರ ಪೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ರಂಗAಪೇಟ, ಹಳಿಗೇರಾ, ವಡಗೇರಾ, ಹಳಿಸಗರ, ಯರಗೋಳ, ಉಕ್ಕಿನಾಳ, ಮುಂಡರಗಿ ತಾಂಡಾ ಸೇರಿದಂತೆ ೧೩ಕ್ಕೂ ಹೆಚ್ಚು ಗ್ರಾಮಗಳ ಸಾರ್ವಜನಿಕರಿಂದ ಕರೆಗಳು ಸ್ವೀಕೃತವಾದವು. ಎಲ್ಲಾ ಕರೆಗಳನ್ನು ಶಾಂತಚಿತ್ತದಿAದ ಆಲಿಸಿದ ಜಿಲ್ಲಾಧಿಕಾರಿಗಳು, “ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ” ಯೋಜನೆಯ ಕುರಿತಾದ ಸಾರ್ವಜನಿಕರಲ್ಲಿದ್ದ ಸಂಶಯ ಮತ್ತು ಗೊಂದಲಗಳನ್ನು ನಿವಾರಿಸಿದರು.
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಹೊರಗುತ್ತಿಗೆ ನೌಕರರಿಗೆ ನಿಯಮಾನುಸಾರ ಪ್ರತಿ ತಿಂಗಳು ಸಂಬಳ ನೀಡಬೇಕು. ಇಲ್ಲವಾದಲ್ಲಿ ಕಚೇರಿ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು. ಹೊರಗುತ್ತಿಗೆ ಸಿಬ್ಬಂದಿಗೆ ಪಿ.ಎಫ್ ಭರಿಸದಿದ್ದಲ್ಲಿ ಸಂಬAಧಪಟ್ಟ ಏಜೆನ್ಸಿಯವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್, ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ನಾರಾಯಣಪ್ಪ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...