ಶನಿವಾರ, ಡಿಸೆಂಬರ್ 21, 2019

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ತ್ವರಿತಗೊಳಿಸಲು ಕ್ರಮ
-:ತ.ಮ. ವಿಜಯ್ ಭಾಸ್ಕರ್
ಯಾದಗಿರಿ, ಡಿಸೆಂಬರ್ ೨೧ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ತ.ಮ. ವಿಜಯ್ ಭಾಸ್ಕರ್ ಅವರು ತಿಳಿಸಿದರು.
ಅವರು ಡಿ.೨೧ರ ಶನಿವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ನೂತನ ಜಿಲ್ಲಾಸ್ಪತ್ರೆ (ಮೆಡಿಕಲ್ ಕಾಲೇಜು) ಕಟ್ಟಡವನ್ನು ಪರಿಶೀಲಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ೩೦೦ ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದೆ. ಈ ಆಸ್ಪತ್ರೆಗೆ ರಾಷ್ಟಿçÃಯ ಹೆದ್ದಾರಿ(ಮುಖ್ಯರಸ್ತೆ)ಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ ೫೦ ಕೋಟಿ ರೂ. ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೀಠೋಪಕರಣ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ. ನೂತನ ಜಿಲ್ಲಾಸ್ಪತ್ರೆ ಕಾರ್ಯರೂಪಕ್ಕೆ ಬಂದಲ್ಲಿ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಕೂಡ ಆರಂಭಿಸಲು ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಜಲ ಮರುಪೂರಣಕ್ಕಿಂತ ಮಳೆನೀರು ಮರುಬಳಕೆ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಅವರು ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅನುಷ್ಠಾನಗೊಳಿಸುತ್ತಿರುವ ಏಕಲವ್ಯ ಮಾದರಿಯ ವಸತಿ ಶಾಲೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಪ್ರಾಂಶುಪಾಲರನ್ನು ನೇಮಕ ಮಾಡಿ ಬರುವ ಜೂನ್ ೧ರಿಂದ ವಸತಿ ಶಾಲೆ ಕಾರ್ಯಾರಂಭ ಮಾಡಬೇಕು. ನೇಮಕ ವಿಳಂಬವಾದಲ್ಲಿ ಪ್ರಾಂಶುಪಾಲರ ನಿಯೋಜನೆ ಮಾಡುವಂತೆ ಅವರು ನಿರ್ದೇಶಿಸಿದರು. 
ನಂತರ ವಸತಿ ಶಾಲೆಯ ಹತ್ತಿರ ನಿರ್ಮಾಣವಾಗುತ್ತಿರುವ ಹೈಟೆಕ್ ಜವಳಿ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ತರಬೇತಿ ಕೇಂದ್ರವನ್ನು ಮಾರ್ಚ್ ಅಂತ್ಯದೊಳಗೆ ಆರಂಭಿಸಬೇಕು. ತರಬೇತಿಗಾಗಿ ಮಷೀನ್‌ಗಳು ಬಂದ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ವಿದ್ಯುತ್ ಸಂಪರ್ಕ ಇಲ್ಲವೆಂದು ನೆಪ ಹೇಳುವಂತಿಲ್ಲ ಎಂದು ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶೌಚಾಲಯ ಬಳಸದಿದ್ದರೆ ಅನುದಾನ ವಾಪಸ್: ಬಂದಳ್ಳಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳ ಬಳಕೆ ಕುರಿತು ಪರಿಶೀಲಿಸಿದರು. ಕೆಲವರು ಕೋಳಿಗೂಡು
ಮತ್ತು ಇನ್ನಿತರ ವಸ್ತುಗಳನ್ನು ಇಟ್ಟಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವೈಯಕ್ತಿಕ ಶೌಚಾಲಯಗಳನ್ನು ಬಳಸದ ಸಂಬAಧಿಸಿದ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಅನುದಾನವನ್ನು ವಾಪಸ್ ಪಡೆಯುವುದಾಗಿ ಎಚ್ಚರಿಕೆಯ ನೋಟಿಸ್ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಪ್ರತಿ ತಿಂಗಳು ಪಡಿತರ ಧಾನ್ಯವನ್ನು ಸರಿಯಾಗಿ ವಿತರಿಸುತ್ತಿರುವ ಬಗ್ಗೆ ಹಾಗೂ ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇ-ಕೆವೈಸಿ), ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಈ ಸಂದರ್ಭದಲ್ಲಿ ಮಾಹಿತಿ ಪಡೆದರು.
ಅನುದಾನ ಬಿಡುಗಡೆಗೆ ಸೂಚನೆ: ಯಾದಗಿರಿ ತಾಲ್ಲೂಕಿನ ಎಂ.ಹೊಸಳ್ಳಿ ತಾಂಡಾದಲ್ಲಿ ಅಲೆಮಾರಿ ಸಮುದಾಯದ ವಸತಿ ಕಾಲೊನಿಯಲ್ಲಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಪರಿಶೀಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪ್ರತಿ ಮನೆಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಿಂದ ೧.೫ ಲಕ್ಷ ರೂ. ಹಾಗೂ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ೩.೫ ಲಕ್ಷ ರೂ. ಫಲಾನುಭವಿಗಳಿಗೆ ಸಂದಾಯವಾಗುತ್ತದೆ. ೩.೫ ಲಕ್ಷ ರೂ.ಗಳ ಪೈಕಿ ೧.೭೫ ಲಕ್ಷ . ಮಾರೂತ್ರ ಬಂದಿದೆ ಎಂಬುದಾಗಿ ಅಧಿಕಾರಿಗಳಿಂದ ವರದಿ ಪಡೆದರು. ಸ್ಥಳದಲ್ಲಿಯೇ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಕರೆ ಮಾಡಿ, ಜಿಲ್ಲಾಧಿಕಾರಿಗಳಿಂದ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ ೬ ತಿಂಗಳಾಗಿದೆ. ಸೋಮವಾರದೊಳಗೆ ಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ ವಸತಿ ನಿಗಮದಿಂದಲೂ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಸೂಚಿಸಿದರು.
ಯಾದಗಿರಿ ನಗರದ ಬಾಲಕಿಯರ ಬಾಲ ಮಂದಿರ, ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ ಯಾದಗಿರಿಯ ನಾಲಾ ಹೂಳೆತ್ತಿರುವ ಕಾಮಗಾರಿಯನ್ನೂ ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪರಿಶೀಲಿಸಿದರು. ನಂತರ ನಾಗರಬಂಡ ಅಂಗನವಾಡಿ ಕೇಂದ್ರ, ಸೈದಾಪುರದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿಗಳು ಅಲ್ಲಿ ಭೋಜನ ಸವಿದರು. ತದನಂತರ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಸಂಬAಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...