ಹಿಂದುಳಿದ ವರ್ಗ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಕೇವಲ ಲಿಂಕ್ ಇದ್ದಂತೆ
ಯಾದಗಿರಿ, ಡಿಸೆಂಬರ್ ೩೧ (ಕರ್ನಾಟಕ ವಾರ್ತೆ): ಐಎಎಸ್, ಕೆಎಎಸ್, ಬ್ಯಾಂಕಿ0ಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನವೆಂಬುದು ಪುಸ್ತಕದ ಮುಖಪುಟ ಅಥವಾ ವೆಬ್‌ಸೈಟ್ ಲಿಂಕ್ ಇದ್ದಂತೆ. ಅಭ್ಯರ್ಥಿಗಳೇ ಸ್ವತಃ ಲಿಂಕ್ ಕ್ಲಿಕ್ ಮಾಡಿ ಅಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿAಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಲು ಅಭ್ಯರ್ಥಿಗಳು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಲೇಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಅಂಗೈನಲ್ಲಿ ಜಗತ್ತು ಇದೆ. ಅಂತರ್ಜಾಲದಲ್ಲಿ ಎಲ್ಲಾ ವಿಷಯಗಳು ಸಿಗುತ್ತವೆ. ಆದರೆ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವಿರಬೇಕು. ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮವನ್ನು ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಿ. ಪರೀಕ್ಷೆಗಳ ತಯಾರಿಗೆ ಆಸಕ್ತಿ ಮತ್ತು ಸಾಮರ್ಥ್ಯ ಇರುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಶಿಕ್ಷಣಕ್ಕೆ ಸಂಬAಧಿಸಿದ ವಿಷಯಗಳಿಗೆ ಆದ್ಯತೆ ನೀಡಬೇಕು. ಎಲ್ಲಾ ಪುಸ್ತಕಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ, ಗ್ರಂಥಾಲಯಗಳಿಗೆ ಹೋಗಿ ಅಭ್ಯಾಸ ಮಾಡಬೇಕು. ಪಠ್ಯದ ಜೊತೆಗೆ ಮಹಾತ್ಮ ಗಾಂಧಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇರಿದಂತೆ ಮಹನೀಯರ ಜೀವನ ಚರಿತ್ರೆ ಓದಬೇಕು ಎಂದು ಕಿವಿಮಾತು ಹೇಳಿದರು.
ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಪರ ಆಯುಕ್ತರಾದ ನಳಿನ್ ಅತುಲ್ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ಓದಬೇಕು. ಪ್ರಸ್ತಾವನೆಯಲ್ಲಿ ಸಂವಿಧಾನದ ಇಡೀ ಮೌಲ್ಯವನ್ನು ತಿಳಿಸಿಕೊಡಲಾಗಿದೆ. ಇದನ್ನು ಪರೀಕ್ಷೆಗಾಗಿ ಓದದೇ ಅರ್ಥೈಸಿಕೊಳ್ಳಬೇಕು. ಇದರ ಪ್ರತಿ ಶಬ್ದವನ್ನು ಬಾಯಿಪಾಠ ಮಾಡಿದರೂ ಒಳ್ಳೆಯದು ಎಂದು ಸಲಹೆ ನೀಡಿದರು.
ಪರೀಕ್ಷೆಗೆ ತಯಾರಿ ನಡೆಸುವವರು ಗುಂಪು ಚರ್ಚೆ ಮಾಡಬೇಕು. ಅಭ್ಯರ್ಥಿಗಳಲ್ಲಿ ಸತತ ಪ್ರಯತ್ನವಿದ್ದರೆ ಜಾತಿ, ಸಮುದಾಯ, ಶ್ರೀಮಂತ, ಬಡವ ಎಂಬ ಅಂಶಗಳು ಅಡ್ಡಿ ಬರುವುದಿಲ್ಲ. ಪ್ರಯತ್ನದಂತೆ ಫಲ ಸಿಗುತ್ತದೆ. ಸರಿಯಾಗಿ ತಯಾರಿ ಮಾಡಿಕೊಂಡರೆ ಯಾವುದೇ ಪರೀಕ್ಷೆಯನ್ನು ಕೂಡ ಎದುರಿಸಬಹುದು. ರ‍್ಯಾಂಕ್ ಬಗ್ಗೆ ವಿಚಾರ ಮಾಡಬಾರದು. ನಾನು ಐಎಎಸ್ ಪ್ರಾಥಮಿಕ ಪರೀಕ್ಷೆಯನ್ನು ಎರಡು ಸಲ ಬರೆದರೂ ಪಾಸ್ ಮಾಡಲಿಲ್ಲ. ಅಗತ್ಯ ತಯಾರಿ ಮಾಡದಿರುವುದು ಇದಕ್ಕೆ ಕಾರಣವಾಗಿತ್ತು. ಮೂರನೇ ಬಾರಿಗೆ ಸರಿಯಾಗಿ ತಯಾರಿ ಮಾಡಿಕೊಂಡು ಐಎಎಸ್ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯನ್ನು ಪಾಸ್ ಮಾಡಿದೆ ಎಂದು ತಮ್ಮ ಅನುಭವವನ್ನು ಹಂಚಿಕೊAಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಮಾತನಾಡಿ, ಕುಟುಂಬ ಅಥವಾ ಸಂಬAಧಿಕರಲ್ಲಿ ಯಾರೊ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಐಎಎಸ್, ಕೆಎಎಸ್, ಇನ್ನಿತರೆ ಪರೀಕ್ಷೆಗಳನ್ನು ಬರೆಯಬಾರದು. ಸ್ಪರ್ಧಾತ್ಮಕ ಬರೆಯುವ ಅಭ್ಯರ್ಥಿಗಳು ಮೊದಲು ಮನಸ್ಸಿನಿಂದ ಸಿದ್ಧವಾಗಬೇಕು. ಕಲಿಯುವ ಛಲವಿದ್ದರೆ ಪರೀಕ್ಷೆಯಲ್ಲಿ ಭಾಷೆ ಅಡ್ಡಿಯಾಗುವುದಿಲ್ಲ. ಮಾತೃಭಾಷೆಯಲ್ಲಿಯೇ ಓದಿ ಅತ್ಯುನ್ನತ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿದ್ದಾರೆ. ನಿತ್ಯ ಇಂಗ್ಲಿಷ್ ದಿನಪತ್ರಿಕೆ, ಶಬ್ದಕೋಶ ಓದಬೇಕು. ಆತ್ಮವಿಶ್ವಾಸ, ದೃಢಸಂಕಲ್ಪ ಮಾಡಿದರೆ ಯಾವುದೇ ಭಾಷೆಯನ್ನು ಕಲಿಯಬಹುದು ಎಂದು ಸಲಹೆ ನೀಡಿದರು.
ಪ್ರತಿಯೊಂದು ಪರೀಕ್ಷೆಗೆ ಪಠ್ಯಕ್ರಮ ಇರುತ್ತದೆ. ಅದರಂತೆ ಪ್ರತಿದಿನ ಅಭ್ಯಾಸ ಮಾಡಿ ಪರೀಕ್ಷೆಗೆ ತಯಾರಿ ನಡೆಸಬೇಕು. ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಸ್ಪರ್ಧಾತ್ಮಕ ಪರೀಕ್ಷೆಗಳು ಮ್ಯಾರಾಥಾನ್ ಓಟ ಇದ್ದಂತೆ. ಯಾರು ಚೆನ್ನಾಗಿ ಓಡುತ್ತಾರೊ ಅವರು ಗೆಲ್ಲುತ್ತಾರೆ ಎಂದು ಉದಾಹರಣೆಸಹಿತ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ವೆಂಕಟೇಶ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ರೇವಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕರಾದ ಸಾಬಯ್ಯ ಗುತ್ತೇದಾರ ಹಾಗೂ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.