ಶನಿವಾರ, ಜನವರಿ 16, 2021

 ಜಿಲ್ಲೆಯ 5 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪ್ರಕ್ರಿಯೆ ಸುಸೂತ್ರ

ಯಾದಗಿರಿಯಲ್ಲಿ 247 ಜನರಿಗೆ ಕೋವಿಡ್ ಲಸಿಕೆ

ಯಾದಗಿರಿ.ಜ.16(ಕ.ವಾ):- ಜಿಲ್ಲೆಯ 5 ಲಸಿಕಾ ಕೇಂದ್ರಗಳಲ್ಲಿ ಶನಿವಾರ ಕೋವಿಡ್ ಲಸಿಕಾ ಪ್ರಕ್ರಿಯೆ ಅತ್ಯಂತ ಸುಸೂತ್ರವಾಗಿ ಜರುಗಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಲೆ ಜಿಲ್ಲೆಯ ಲಸಿಕಾ ಕೇಂದ್ರಗಳಲ್ಲಿ ಮೊದಲ ಸುತ್ತಿನಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.
ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಮಾಹಾಮಾರಿ ಸಂದರ್ಭದಲ್ಲಿ ಕೆಲಸ ನಿರ್ವಹಿಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೆಚ್ಚುಗೆಗಳಿಸಿದ್ದ ಅಶೋಕ ಅವರಿಗೆ ಮೊದಲಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
5 ಲಸಿಕಾ ಕೇಂದ್ರಗಳಲ್ಲಿ ಒಟ್ಟು 247 ಜನರಿಗೆ ಲಸಿಕೆ ನೀಡಲಾಗಿದೆ. ಗ್ರೂಪ್ ಡಿ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದವರಿಗೆ 28 ದಿನಗಳ ನಂತರ ಮತ್ತೆ ಎರಡನೇ ಡೊಸ್ ಪಡೆಯಲು ಆಗಮಿಸಬೇಕು, ತಮಗೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಮತ್ತು ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸ ನಿಂದ ಆಗಾಗ ಕೈಗಳ ಸ್ವಚ್ಛಗೊಳಿಸುವಿಕೆ ಕೆಲಸ ಮಾಡಬೇಕು.
ಲಸಿಕೆ ಪಡೆದ ನಂತರ ಲಸಿಕೆ ಹಾಕಿಸಿಕೊಂಡವರಿಗೆ ಅಬ್ಸರ್ವೇಶನ್ ಕೊಣೆಯಲ್ಲಿ ಅರ್ಧಗಂಟೆಗಳ ಕಾಲ ನಿಗಾವಹಿಸಿರುವುದು ಕಂಡುಬAದಿತು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾದ ಬಗ್ಗೆ ವರದಿಯಾಗಿರುವುದಿಲ್ಲ.
ಕೇಂದ್ರದೊಳಗೆ ಲಸಿಕೆ ಪಡೆಯುವವರು ಹಾಗೂ ನಿಯೋಜಿತ ಅಧಿಕಾರಿಗಳ ಪ್ರವೇಶ ಹೊರತುಪಡಿಸಿ ಉಳಿದವರನ್ನು ನಿಷೇಧಿಸಲಾಗಿತ್ತು.
ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್, ಜಿಪಂ ಸಿಇಒ ಶಿಲ್ಪಾ ಶರ್ಮಾ, ಶಾಸಕರಾದ ವೆಂಕಟರಡ್ಡಿ ಮುದ್ನಾಳ ಅವರು ಹೊಸ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿದರು ಹಾಗೂ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಅವರು ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು,ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 445 ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದ್ದು, ನೋಂದಣಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಹೊಸ ಜಿಲ್ಲಾ ಆಸ್ಪತ್ರೆ, ಶಹಾಪೂರ, ಸುರಪುರ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆ, ಯು.ಪಿ.ಹೆಚ್.ಸಿ ಸುರಪುರ ಹಾಗೂ ಪಿ.ಹೆಚ್.ಸಿ ಯರಗೋಳ ಕಡೆ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಆರೋಗ್ಯ ಸಿಬ್ಬಂದಿಗೆ ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸೇರಿದಂತೆ 5 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು,ಇಲ್ಲಿ ಈಗಾಗಲೇ ನೋಂದಾಯಿಸಲಾಗಿರುವ ಆರೋಗ್ಯ ಸೇವಾ ಸಿಬ್ಬಂದಿಗೆ ಜ.18ರಿಂದ ಲಸಿಕೆ ನೀಡಲಾಗುವುದು ಎಂದರು.
ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿ ಅಶೋಕ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಎಡೆಬಿಡದೇ ಕೆಲಸ ನಿರ್ವಹಿಸಿದ್ದು ಯಾವುದೇ ರೀತಿಯ ಸೊಂಕಿಗೆ ಒಳಗಾಗಿರಲಿಲ್ಲ. ಮುನ್ನಚ್ಚೆರಿಕೆ ಕ್ರಮವಾಗಿ ಹಾಗೂ ಸಹದ್ಯೋಗಿಗಳಲ್ಲಿ ಧೈರ್ಯಬರಲಿ ಮತ್ತು ಔಷಧಿ ಬಗ್ಗೆ ಅನಗತ್ಯ ಗೊಂದಲ ಮೂಡದಿರಲಿ ಎಂಬ ಉದ್ದೇಶದಿಂದ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದಾಗಿನಿಂದ ಯಾವುದೇ ಸಮಸ್ಯೆಯಾಗಿಲ್ಲ ಮೊದಲು ಹೇಗಿದ್ದೇನೋ ಈಗಲೂ ಆಗೆಯೇ ಇದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾದ ಪ್ರಕಾಶ್ ಜಿ.ರಜಪೂತ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಡಾ.ಇಂದುಮತಿ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಸಂಜೀವ್ ಕುಮಾರ್ ರಾಯಚೂರಕರ್ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...