ಮಂಗಳವಾರ, ಜನವರಿ 12, 2021

 ಮಹಿಳಾ ಕಾಯಕೋತ್ಸವ ಅಭಿಯಾನದ ಯಶಸ್ವಿಗೆ ಸೂಚನೆ

ಯಾದಗಿರಿ,ಜ 12 (ಕ.ವಾ);- ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳ್ಳುತ್ತಿರು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಜಿಲ್ಲೆಯಲ್ಲಿ ಜನವರಿ 15ರಿಂದ ಮಾರ್ಚ್ 15ರವರೆಗೆ ನಡೆಯುವ ಮಹಿಳಾ ಕಾಯಕೋತ್ಸವ ಯಶಸ್ವಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ ಅವರು ಸೂಚಿಸಿದರು.
ಅವರು ಮಂಗಳವಾರ ಗುರುಮಿಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು ವಿಡಿಯೋ ಸಂವಾದದ ಮೂಲಕ ನೀಡಿದ ನಿರ್ದೇಶನದಂತೆ ಜನವರಿ 15ರಿಂದ ಮಾರ್ಚ್ 15ರವರೆಗೆ ಜಿಲ್ಲೆಯಲ್ಲಿ ನಡೆಯುವ ಮಹಿಳಾ ಕಾಯಕೋತ್ಸವ ಅಭಿಯಾನ ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆ ಕನಿಷ್ಠ ಶೇ.5ರಷ್ಟು ಹೆಚ್ಚಿಸಿ, ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸಬೇಕು. ಕಾಮಗಾರಿ ಸ್ಥಳಗಳನ್ನು ಮಹಿಳೆ ಹಾಗೂ ಮಕ್ಕಳ ಸ್ನೇಹಿಯಾಗಿ ಮಾಡಬೇಕು. ನರೇಗಾ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳು ಭಾಗವಹಿಸುವಿಕೆಗೆ ಉತ್ತೇಜನ ನೀಡಿ, ಮಹಿಳೆಯರು ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ, ಮಹಿಳಾ ಕಾಯಕೋತ್ಸವ ಬಂಧುಗಳಿಗೆ ತರಬೇತಿ ನೀಡಬೇಕು ಎಂದು ಅವರು ಹೇಳಿದರು.

ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ದನ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಳ್ಳಲು, ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಭೂ ಅಭಿವೃದ್ಧಿ (ಸಮ ಬದು), ಕೃಷಿ ಹೊಂಡ, ತಡೆಗೋಡೆ, ಚೆಕ್ ಡ್ಯಾಮ್, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಹಾಗೂ ತೋಟಗಾರಿಕೆ ಬೆಳೆಗಳ ನಾಟಿ ಮಾಡಲು ಸಹ ಅವಕಾಶವಿದ್ದು ಮಹಿಳೆಯರು ಇದರ ಸದುಪಯೋಗ ಪಡೆಯುವಂತೆ ಅರಿವು ನೀಡಬೇಕೆಂದು ಅವರು ತಿಳಿಸಿದರು.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಐದು ವರ್ಷದೊಳಗಿನ ಮಕ್ಕಳ ಪಾಲನೆ, ಕೂಲಿ ಕಾರ್ಮಿಕರಿಗೆ ಕೆಲಸ ನಿರ್ವಸುವ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುರುಮಿಠಕಲ್ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಬಸವರಾಜ, ಯಾದಗಿರಿ ತಾಲ್ಲೂಕು ಪಂಚಾಯತಿ ಟಿಸಿ ಶರಣಪ್ಪ, ಚಿನ್ನಾಕಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರಭದ್ರಪ್ಪ, ಕಾರ್ಯದರ್ಶಿ ಶರಣಪ್ಪ, ಬಿಲ್ ಕಲೆಕ್ಟರ್ ಮಂಜುನಾಥ, ಡಿಇಒ ಜಗನ್, ಟಿಐಇಸಿ ಬಸಪ್ಪ ಹಾಗೂ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.









ಶ್ರೀಮೈಲಾರಲಿಂಗೇಶ್ವರ, ಶ್ರೀಬಲಭೀಮೇಶ್ವರ, ಶ್ರೀಹೈಯಾಳಲಿಂಗೇಶ್ವರ ಸೇರಿದಂತೆ ಇತರೆ ಜಾತ್ರೆಗಳು ರದ್ದು

ಯಾದಗಿರಿ, ಜ.12 (ಕರ್ನಾಟಕ ವಾರ್ತೆ):- ಕೋವಿಡ್-19 ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿರುವ ನಿಟ್ಟಿನಲ್ಲಿ 2021ನೇ ಸಾಲಿನ ಜನವರಿಯಲ್ಲಿ ನಡೆಯಬೇಕಿದ್ದ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ, ಶಹಾಪೂರ ತಾಲೂಕಿನ ಬಿ-ಗುಡಿ ಗ್ರಾಮದ ಶ್ರೀಬಲಭೀಮೇಶ್ವರ, ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ, ಹಾಗೂ ವಡಗೇರಾ ತಾಲೂಕಿನ ಹೈಯಾಳ ಗ್ರಾಮದ ಶ್ರೀಹೈಯಾಳಲಿಂಗೇಶ್ವರ ದೇವಸ್ಥಾನಗಳಲ್ಲಿ ಜರುಗಲಿರುವ ಜಾತ್ರಾ ಉತ್ಸವಗಳು ರದ್ದುಪಡಿಸಲಾಗಿದ್ದು, ಭಕ್ತಾಧಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಜಾತ್ರಾ ಉತ್ಸವಗಳಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಅಂತರಾಜ್ಯಗಳಿAದಲ್ಲೂ ಭಕ್ತಾಧಿಗಳು ಆಗಮಿಸುವರು, ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು 2021ರ ಜನವರಿ ನಡೆಯಬೇಕಿದ್ದ ವಿವಿಧ ದೇವಸ್ಥಾನಗಳ ಜಾತ್ರಾ ಉತ್ಸವವನ್ನು ರದ್ದುಪಡಿಸಲಾಗಿದೆ, ಆದ ಕಾರಣ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಯಾದಗಿರಿ, ಜ.12 (ಕರ್ನಾಟಕ ವಾರ್ತೆ):- ತುಮಕೂರ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳು ಜ.3 ರಿಂದ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ವಸತಿ ಮತ್ತು ಊಟದ ವ್ಯವಸ್ಥೆಯಿದ್ದು ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9449926809 ಕರೆ ಮಾಡಬಹುದಾಗಿದೆ. ಎಂದು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳ ಆಯ್ಕೆಗೆ ದೈಹಿಕ ಪರೀಕ್ಷೆ

ಯಾದಗಿರಿ.ಜ12 (ಕ.ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2021-22ನೇ ಸಾಲಿನಲ್ಲಿ ಕ್ರೀಡಾ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತಿಭಾವಂತ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು 2021ರ ಜನವರಿ 15 ರಂದು ಏರ್ಪಡಿಸಲಾಗಿದೆ ಎಂದು ಯಾದಗಿರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಅವರು ತಿಳಿಸಿದ್ದಾರೆ.
ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಹಾಗೂ ಫುಟಬಾಲ್ ಕ್ರೀಡೆಗಳ ಆಯ್ಕೆಗಾಗಿ 15 ರಂದು ಬೆಳಿಗ್ಗೆ 9 ಗಂಟೆಯಿAದ ಜಿಲ್ಲಾ ಕ್ರೀಡಾಗಂಣದಲ್ಲಿ ನಿಗದಿಪಡಿಸಲಾಗಿದೆ.ಕಿರಿಯರ ವಿಭಾಗದ ಅಥ್ರ‍್ಲೇಟಿಕ್ಸ್ ಹಾಗೂ ಹಾಕಿ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 7ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ದಿನಾಂಕ: 01-06-2007ರ ನಂತರ ಜನಿಸಿದ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ. ಪ್ರಥಮ ಹಂತದಲ್ಲಿ ಆಯ್ಕೆಯಾದ ಕ್ರೀಡಾ ಪಟುಗಳು ದ್ವಿತೀಯ ಹಂತದ ದೈಹಿಕ ಪರೀಕ್ಷೆ ಜ 16 ರಂದು ಶನಿವಾರ ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ.

ಹಿರಿಯರ ವಿಭಾಗದ ಅಥ್ಲ್ರೇಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಕುಸ್ತಿ ಹಾಗೂ ಫುಟಬಾಲ್ ಕ್ರೀಡೆಗಳ ಆಯ್ಕೆಗಾಗಿ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ದಿನಾಂಕ: 01-06-2003ರ ನಂತರ ಜನಿಸಿದ ಯುವಕ, ಯುವತಿಯರು ನೇರವಾಗಿ 2021ರ ಜನವರಿ 17 ರಂದು ಬೆಳಿಗ್ಗೆ 9 ಗಂಟೆಯಿAದ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ನೇರವಾಗಿ ವಿಭಾಗೀಯ ಮಟ್ಟದಲ್ಲಿ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...