ಕೋವಿಡ್ ಲಸಿಕೆ ಅಣಕು ಪ್ರಯೋಗಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ
ಯಾದಗಿರಿ,ಜ 08 (ಕ.ವಾ);- ಕೋವಿಡ್-19 ಲಸಿಕೆ ಪ್ರಯೋಗದ ಅಣಕು ಪ್ರದರ್ಶನಕ್ಕೆ ಯಾದಗಿರಿ ಜಿಲ್ಲಾಧಿಕಾರಿಯಾದ ಡಾ.ರಾಗಪ್ರಿಯ ಆರ್. ಅವರು ಚಾಲನೆ ನೀಡಿದರು.
ನಗರದ ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಲಸಿಕಾಕರಣದ ತಾಲೀಮು ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಲಸಿಕೆ ನೀಡಲು ಸ್ಥಾಪಿಸಲಾಗಿರುವ, ಪ್ರವೇಶ ಮತ್ತು ನೋಂದಣಿ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳನ್ನು ಪರಿಶೀಲಿಸಿದ ಅವರು, ಕೊವಿನ್ ಸಾಫ್ಟ್ವೇರ್ ನಲ್ಲಿ ನೋಂದಣಿ ಮಾಡುವ ಕ್ರಮ, ಲಸಿಕೆಯ ಸಂಗ್ರಹ, ಸಾಗಣೆ, ಡಿ-ಫ್ರೀಜ್ ಕಾರ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ತಾಲೀಮು ಕಾರ್ಯವನ್ನು ವೀಕ್ಷಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಐದು ಸರ್ಕಾರಿ ಹಾಗೂ ಒಂದು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 06 ಲಸಿಕಾ ಪ್ರಯೋಗ ನಡೆಸಲಾಗುತ್ತಿದೆ. ಮುಂದೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಾರಿಯರ್ಸಗಳಿಗೆ ಲಸಿಕೆ ನೀಡಲು 53 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ಅಲ್ಲಿನ ಎಲ್ಲಾ ಸಿಬ್ಬಂದಿ ವರ್ಗದ ಮಾಹಿತಿ ಸಂಗ್ರಹಿಸಲಾಗಿದೆ.ಇನ್ನೂ ಹೆಸರುಗಳಿದ್ದರೆ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ.ಸಂಜೀವ್ ಕುಮಾರ್ ರಾಯಚೂರುಕಾರ್, ಆರ್.ಎಮ್.ಒ ವಿಭಾಗದ ಮುಖ್ಯಸ್ಥರಾದ ಡಾ.ನೀಲಮ್ಮ , ದಂತ ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ಪ್ರಸಾದ್, ಬಿ.ಎನ್.ಟಿ ವಿಭಾಗದ ಮುಖ್ಯಸ್ಥರಾದ ಡಾ.ರಾಮನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ