ಶುಕ್ರವಾರ, ಮಾರ್ಚ್ 12, 2021




 ಪರೀಕ್ಷಾರ್ಥಿಗಳಲ್ಲಿ ಕೀಳರಿಮೆ ಬೇಡ

                                              ಜಿಲ್ಲಾಧಿಕಾರಿ: ಡಾ ರಾಗಪ್ರಿಯಾ ಆರ್

ಯಾದಗಿರಿ,ಫೆ. 12 (ಕ.ವಾ):- ಪರೀಕ್ಷಾರ್ಥಿಗಳು ಕೀಳರಿಮೆ ಬಿಟ್ಟು ಸ್ವ ಪ್ರಯತ್ನ, ಸಾಮರ್ಥ್ಯ ಪರಿಶ್ರಮದಿಂದ ಅಗಾಧ ಸಾಧನೆ ಮಾಡಬೇಕು. ಅನಗತ್ಯ ಸಂಗತಿಗಳ ಬಗ್ಗೆ ಗಮನ ಹರಿಸಬಾರದು ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.   


ಅವರು ನಗರದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಉದ್ಯೋಗ  ಮತ್ತು ತರಬೇತಿ ಇಲಾಖೆ ಹಾಗೂ ಎಒನ್ ಆಫೀರ‍್ಸ್ ಅಕಾಡೆಮಿ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷಾರ್ಥಿಗಳಿಗೆ ಸಂಕಲ್ಪ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳಡಿ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಹೇಳಿದರು. 


ನಾಗರಿಕ ಸೇವಾ ಪರೀಕ್ಷೆಗಳಿಗೆ ಪೂರ್ವ ಯೋಜಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಧ್ಯಯನದ ಮೇಲೆ ಏಕಾಗ್ರತೆ ಇರಬೇಕು. ಆತ್ಮಸ್ಥೈರ್ಯ ದಿಂದ ನಿಮ್ಮಲ್ಲಿ ಅಂತರ್ಗತವಾಗಿರುವ ವಿದ್ವತ್ತಿನ ಮೇಲೆ ನಂಬಿಕೆಯಿಟ್ಟು ಮುನ್ನಡೆದರೆ ಸಾಧನೆ ಮಾಡಬಹುದೆಂದರು.


ಸಾಧಕರ ಸಾಧನೆಗಳು, ಅನುಭವಗಳು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನೆರವಾಗಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ವಿದ್ಯಾರ್ಥಿ ಸಮುದಾಯ ಉನ್ನತ ಹುದ್ದೆಗಳನ್ನು ಹೊಂದಿ ಉಜ್ವಲ ಬದುಕು ನಿರ್ಮಿಸಿಕೊಂಡು ಸಮಾಜಕ್ಕೆ ಬೆಳಕು ನೀಡುವ ಶಕ್ತಿಯಾಗಬೇಕಾದರೆ ನಿರಂತರವಾಗಿ ಅಧ್ಯಯನಶೀಲರಾಗುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ವಿದ್ಯಾರ್ಥಿಗಳ ಜೀವನ ಬಿಳಿ ಕಾಗದವಿದ್ದಂತೆ. ಬದುಕು ನಿರ್ಮಿಸಿಕೊಳ್ಳಲು ವಿದ್ಯಾರ್ಥಿ ಜೀವನ ಒಂದು ಸುವರ್ಣಾವಕಾಶ. ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯೆಯ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಕ್ರಿಯಾಶೀಲತೆ ಹೊಂದಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ದರ್ಜೆಯಲ್ಲಿ ಉತ್ತಿರ್ಣರಾದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು. 

 

ಕೆ.ಎ.ಎಸ್ ಹಾಗೂ ಐ.ಎ.ಎಸ್  ಕಾರ್ಯಾಗಾರದಲ್ಲಿ ಸುಮಾರು 620 ಪರೀಕ್ಷಾರ್ಥಿಗಳು ಭಾಗಹಿಸಿದರು. 

ಇದೇ ಸಂದರ್ಭದಲ್ಲಿ  ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ್, ಐ.ಎ.ಎಸ್ ಪ್ರೊಬೇಷನರಿಗಳಾದ ಅಶ್ವಿಜ, ಡಾ.ಆಕಾಶ ಹಾಗೂ ರಾಹುಲ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಕೆ.ಎ.ಎಸ್ ಕಿರಿಯ ಶ್ರೇಣಿ ಪ್ರೊಬೇಷನರಿ ಸವಿತಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಮ್ಯಾಗೇರಿ, ಎಒನ್ ಆಫೀರ‍್ಸ್ ಆಕಾಡೆಮಿ ಮುಖ್ಯಸ್ಥರಾದ ಶಿವಕುಮಾರ್ ದೇಶಮಾನೆ, ಅಶ್ವಿನಿ, ಬನ್ನಮ್ಮ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...