ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ ಸಚಿವ ಪ್ರಭು ಚವ್ಹಾಣ್
ಯಾದಗಿರಿ,ಮಾ8 (ಕ.ವಾ):- ಕೋವಿಡ್ ಸಂಕಷ್ಟದ ಸಮಯದಲ್ಲೂ ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹರ್ಷವ್ಯಕ್ತಪಡಿಸಿದ್ದಾರೆ. ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಜನರು ಉದ್ಯೋಗ ಅರಸಿ ದೂರದ ಬೆಂಗಳೂರು, ಮುಂಬೈ, ಹೈದ್ರಾಬಾದಗೆ ತೆರಳುತ್ತಿದ್ದರು. ಬೀದರ್ ನಲ್ಲಿ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್ ನಲ್ಲಿ ಬರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಪ್ಯಾಕೇಜ್ ಘೋಷಣೆ ಮಾಡಿದ್ದು ಬೀದರ್ ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡಿದಂತಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ನಮ್ಮ ಜನರು ನಮ್ಮಲ್ಲಿಯೇ ಉದ್ಯೋಗ ಕಂಡುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಹಾಗೂ ಕೈಗಾರಿಕಾ ಸಚಿವರಾದ ಜಗದಿಶ್ ಶೆಟ್ಟರ್ ಅವರೊಂದಿಗೆ ಹಲವುಬಾರಿ ಚರ್ಚೆ ನಡೆಸಿದ್ದೆ. ಬಜೆಟ್ ನಲ್ಲಿ ಯಾದಗಿರಿ ಜಿಲ್ಲೆಯ ಕಡೆಚೂರಿನಲ್ಲಿ ರೂ.1,478 ಕೋಟಿ ವೆಚ್ಚದಲ್ಲಿ "ಬಲ್ಕ್ ಡ್ರಗ್ ಪಾರ್ಕ" ಅಭಿವೃಧಿ ಆಗುತ್ತಿದ್ದು ಈ ಭಾಗದ ಸಾವಿರಾರು ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬದುಕು ಕಟ್ಟಿಕೊಳ್ಳಲು ನಮ್ಮ ಭಾಗದ ಯುವಜನೆತೆ ಸಾಕಷ್ಟು ಶ್ರಮ ಪಡುತ್ತಿದ್ದರು. ಈ ಹೊಸ ಯೋಜನೆಗಳ ಅನುಷ್ಟಾನದಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ನಂಜುಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಿಸಲು 2021-22 ಸಾಲಿಗೆ ರೂ. 3000 ಕೋಟಿ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರೂ.1,500 ಕೋಟಿಗಳನ್ನು ನೀಡಿದ್ದು ಈ ಭಾಗಕ್ಕೆ ಅಭಿವೃದ್ಧಿಯ ಹೊಸ ಪರ್ವ ಆರಂಭವಾದAತಾಗಿದೆ. ಅಲ್ಲದೇ ಕಲಬುರಗಿ ಜಿಲ್ಲೆಯ ಫಿರೋಜಾಬಾದನಲ್ಲಿ 500 ಮೆಗಾವ್ಯಾಟ್ ಸಾಮರ್ಥದ ಸೌರಶಕ್ತಿ ಪಾರ್ಕ್ ಸ್ಥಾಪನೆ ಆಗಲಿದ್ದು ಕಲ್ಯಾಣ ಕರ್ನಾಟಕ ಮತ್ತಷ್ಟು ಬೆಳಗಲಿದೆ.
ಬಸವ ಕಲ್ಯಾಣದಲ್ಲಿ ರೂ.500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕೆಲಸಕ್ಕೆ ಈಗಾಗಲೇ ರೂ.200 ಕೋಟಿ ಬಿಡುಗಡೆ ಮಾಡಿದ್ದು ಅನುಭವ ಮಂಟಪದ ಕಾಮಗಾರಿಗೆ ವೇಗ ದೊರೆಯಲಿದೆ. ಇದೇ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ ವಿಶೇಷವಾಗಿ ರೂ.5 ಕೋಟಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಕಲ್ಯಾಣ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ