ಮಿಷನ್ ಇಂದ್ರಧನುಷ್ 3.0 ಗೆ ಚಾಲನೆ
ರೋಗ ನಿರೋಧಕ ಲಸಿಕೆಗಳ ಬಗ್ಗೆ ಭಯಬೇಡ:
ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.
ಯಾದಗಿರಿ, ಮಾ.1 (ಕ.ವಾ):- ಪೋಲಿಯೋ ಸೇರಿದಂತೆ ಇತರ ರೋಗಗಳ ನಿಯಂತ್ರಣಕ್ಕೆ ನೀಡುವ ಲಸಿಕೆಗಳ ಬಗ್ಗೆ ಭಯಪಡದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಸಲಹೆ ನೀಡಿದರು.
ನಗರದ ಗಾಂಧಿ ಚೌಕ್‌ನಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಯಾದಗಿರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ತೀವ್ರಗೊಂಡ ಮಿಷನ್ ಇಂದ್ರಧನುಷ್ 3.0 ಉದ್ಘಾಟನಾ ಕಾರ್ಯಕ್ರಮವನ್ನು ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಪೋಲಿಯೋ ಮತ್ತು ಇನ್ನಿತರ ರೋಗಗಳಿಂದ ಬಳಲುವ ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಂದ್ರಧನುಷ್ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಡಿ.ಪಿ.ಟಿ, ಟಿ.ಟಿ, ಪೋಲಿಯೋ ಲಸಿಕೆ ಸೇರಿದಂತೆ ಹತ್ತು ಲಸಿಕೆಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದರು.
ಜನರು ಲಸಿಕೆಗಳನ್ನು ಪಡೆಯುವ ಮೂಲಕ ರೋಗಮುಕ್ತರಾಗಬೇಕು. ಹಳ್ಳಿಯಿಂದ ನಗರದವರೆಗೆ ಸರ್ವೇ ಮಾಡಿಸಿ ಲಸಿಕೆ ಪಡೆಯದವರನ್ನು ಗುರುತಿಸಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಶೇಕಡ 82 ರಷ್ಟು ಜನರಿಗೆ ಲಸಿಕೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.
ಮುಂಬರುವ ದಿನಗಳಲ್ಲಿ 100%ರಷ್ಟು ಪ್ರಗತಿ ಸಾಧಿಸುವಂತೆ ಅವರು ತಿಳಿಸಿದರು.
ಲಸಿಕೆ ಹಾಕದಿದ್ದರೆ ಯಾವ ರೋಗಗಳು ಬರುತ್ತವೆ ಎಂಬುದರ ಕುರಿತು ಸರ್ವೇ ಕಾರ್ಯ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಕಲಬುರಗಿಯ ವಿಭಾಗದ ಎಸ್.ಎಮ್.ಓ ಅನೀಲಕುಮಾರ್ ತಾಳಿಕೋಟಿ ಮಾತನಾಡಿ, ಕಳೆದ ವರ್ಷ ಕೋವಿಡ್-19 ನಿಂದಾಗಿ ವಿವಿಧ ಲಸಿಕೆಗಳಿಂದ ವಂಚಿತರಾಗಿದ್ದ 2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವುದು ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಇAದ್ರಧನುಷ್ ಕಾರ್ಯಕ್ರಮ ಮಾ.1 ರಿಂದ 5 ರವರೆಗೆ ಒಟ್ಟು 5 ದಿನಗಳ ಕಾಲ ನಡೆಯಲಿದ್ದು, ಜಿಲ್ಲೆಯ 2 ವರ್ಷದೊಳಗಿನ 393 ಮಕ್ಕಳಿಗೆ ಹಾಗೂ 321 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ಇದರ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸಯ್ಯಸ್ವಾಮಿ, ಆರ್.ಸಿ.ಎಚ್. ಅಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ,ಹಿರಿಯ ವೈದ್ಯಾಧಿಕಾರಿ ಡಾ.ಭಗವಂತ ಅನ್ವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ