ಏ.17 ರಂದು ದೇವತ್ಕಲ್‌ನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್
ಯಾದಗಿರಿ.ಮಾ.23 (ಕ.ವಾ):- ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ “ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಏಪ್ರಿಲ್ 17 ರಂದು ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದರು.
ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಗ್ರಾಮ ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಸಚಿವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಕುರಿತು ಇಂದು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಏಪ್ರಿಲ್ 17 ರ ರಂದು ದೇವತ್ಕಲ್ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಕೂಡಲೇ ದೇವತ್ಕಲ್ ಗ್ರಾಮದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಬೇಕೆಂದು ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ನಿರ್ದೇಶನ ನೀಡಿದರು.
ಅಂದು ದೇವತ್ಕಲ್ ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ-ತಮ್ಮ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಳಿಗೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಗ್ರಾಮ ವಾಸ್ತವ್ಯದಲ್ಲಿನ ಕಾರ್ಯಗಳು: ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರು ಭೇಟಿ ನೀಡಿ, ಗ್ರಾಮದ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸುವುದು. ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು ಮತ್ತು ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು. ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸುವುದು ಹಾಗೂ ಸ್ಮಶಾನವಿಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸುವುದು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸುವುದು. ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದು. ಆಧಾರ್ ಕಾರ್ಡ್ನ ಅನೂಕೂಲತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ ಒದಗಿಸಲು ಕ್ರಮ, ಪ್ರವಾಹದ ಹಾನಿ ತಡೆಗಟ್ಟಲು ಕ್ರಮ, ಅತಿವೃಷ್ಠಿ, ಅನಾವೃಷ್ಠಿ ಎದುರಿಸಲು ಮುಂಜಾಗ್ರತೆ ಕ್ರಮವಹಿಸುವುದರ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಹದ್ದು ಬಸ್ತು, ಕಂದಾಯ ಗ್ರಾಮಗಳ ರಚನೆ, ಗ್ರಾಮದಲ್ಲಿ ಎಸ್.ಸಿ., ಎಸ್.ಟಿ., ಬಿ.ಸಿ.ಎಂ. ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿಯಲ್ಲಿರುವ ಬಗ್ಗೆ ಕ್ರಮ ವಹಿಸುವರು. ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಆದೇಶಿಸುವುದು, ಗುಡಿಸಲು ರಹಿತ ವಾಸದ ನಿರ್ಮಾಣ ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆಕಟ್ಟಲು ಅನುದಾನ ನೀಡುವಂತೆ ಸಂಬAಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಉನ್ನತ ಅಧಿಕಾರಿಗಳು ಖುದ್ದಾಗಿ ಸ್ಪಂಧಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮ ವಾಸ್ತವ್ಯದಲ್ಲಿ ಅನುಸರಿಸಲು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದೇವತ್ಕಲ್ ಗ್ರಾಮದ ವಿವಿಧ ಕಾಲೋನಿಗಳು ವೀಕ್ಷಣೆ:
ಎಪ್ರಿಲ್ 17 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ದೇವತ್ಕಲ್ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಮಾಡಿ ನಂತರ ವಿವಿಧ ಕಾಲೋನಿಗಳನ್ನು ವೀಕ್ಷಣೆ ಮಾಡಿದರು.
ನಂತರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿವಿಧ ತರಗತಿಗಳು ಹಾಗೂ ಕಂಪ್ಯೂಟರ್ ಕೊಠಡಿ ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಸುರಪುರ ತಾಲೂಕಿನ ತಹಶಿಲ್ದಾರ್ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶಿಲ್ದಾರ್ ವಿನಯ್ ಪಾಟೀಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸವ, ಆಹಾರ ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಕಟ್ಟಿ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ