ಶುಕ್ರವಾರ, ನವೆಂಬರ್ 29, 2019

ಜಿಲ್ಲೆಯಾದ್ಯಂತ ಡಿಸೆಂಬರ್ ೨ರಿಂದ ಮಾರ್ಚ್ ೧೦ರವರೆಗೆ ಅಭಿಯಾನ
ಇಂದ್ರಧನುಷ್ ಲಸಿಕೆಯಿಂದ ಯಾರೂ ವಂಚಿತವಾಗಬಾರದು
-ಸಿಇಒ ಶಿಲ್ಪಾ ಶರ್ಮಾ
ಯಾದಗಿರಿ, ನವೆಂಬರ್ ೨೯ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಡಿಸೆಂಬರ್ ೨ರಿಂದ ೨೦೨೦ರ ಮಾರ್ಚ್ ೧೦ರವರೆಗೆ ನಡೆಯಲಿರುವ ತೀವ್ರತರದ ಮಿಷನ್ ಇಂದ್ರಧನುಷ್ ೨.೦ ಅಭಿಯಾನದಲ್ಲಿ ಲಸಿಕೆಯಿಂದ ವಂಚಿತವಾದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಬೇಕು. ಲಸಿಕೆಯಿಂದ ಯಾರೂ ವಂಚಿತವಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತೀವ್ರತರದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಡಿ.ಪಿ.ಟಿ., ಟಿ.ಡಿ. ಶಾಲಾ ಲಸಿಕೆ ಅಭಿಯಾನದ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಮುಖಾಂತರ ಲಸಿಕೆಯಿಂದ ವಂಚಿತ ೬,೬೪೦ ಮಕ್ಕಳು ಹಾಗೂ ೩೯೩ ಗರ್ಭಿಣಿಯರನ್ನು ಗುರುತಿಸಿದ್ದು, ಅಭಿಯಾನದಲ್ಲಿ ಇವರೆಲ್ಲರಿಗೂ ಲಸಿಕೆ ನೀಡಬೇಕು. ಅಭಿಯಾನದ ಯಶಸ್ವಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಅಗತ್ಯ ಸಹಕಾರ ನೀಡಬೇಕು ಎಂದು ಅವರು ನಿರ್ದೇಶಿಸಿದರು.
ಅಭಿಯಾನದ ಕುರಿತಂತೆ ಜಿಲ್ಲೆಯ ಪ್ರತಿ ಶಾಲೆಯಿಂದ ಮಕ್ಕಳ ಮೂಲಕ ಜಾಗೃತಿ ಜಾಥಾ ನಡೆಸಬೇಕು. ಇದಕ್ಕಾಗಿ ಶಾಲೆಗಳ ವಿಜ್ಞಾನ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು. ವಿಜ್ಞಾನ ಶಿಕ್ಷಕರು ಇಲ್ಲವಾದಲ್ಲಿ ಕ್ರಿಯಾಶೀಲ ಶಿಕ್ಷಕರನ್ನು ನೇಮಿಸಬೇಕು. ಯಾವುದೇ ಮಗು ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಸುತ್ತೋಲೆ ಹೊರಡಿಸುವಂತೆ ಅವರು ತಿಳಿಸಿದರು.
ಸಮುದಾಯಗಳ ಸಹಭಾಗಿತ್ವ ಇರಲಿ: ತೀವ್ರತರದ ಮಿಷನ್ ಇಂದ್ರಧನುಷ್ ನಿರಂತರ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಸಮುದಾಯಗಳ ಸಹಭಾಗಿತ್ವ ತುಂಬಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್ಗಳಲ್ಲಿ ಸಮುದಾಯದ ಮುಖ್ಯಸ್ಥರು ಅಥವಾ ಮುಖಂಡರು ತಪ್ಪದೇ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಬೇಕು ಎಂದು ಸಿಇಒ ಶಿಲ್ಪಾ ಶರ್ಮಾ ಅವರು ಸಭೆಯಲ್ಲಿ ಹಾಜರಿದ್ದ ವಿವಿಧ ಸಮುದಾಯಗಳ ಮುಖಂಡರನ್ನು ಮನವಿ ಮಾಡಿದರು.
ಆಯುಷ್ಮಾನ್ ಕಾರ್ಡ್ ಪಡೆಯಿರಿ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ ಮತ್ತು ಹೊಂದಿರದ ಕುಟುಂಬಗಳು ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಪ್ರತಿಯೊಬ್ಬರು ನೋಂದಾಯಿಸಿ ಯೋಜನೆಯ ಲಾಭ ಪಡೆಯುವಂತೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಲಬುರಗಿಯ ವಿಭಾಗಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‌ಕುಮಾರ್ ಎಸ್.ತಾಳಿಕೋಟಿ ಅವರು ಮಾತನಾಡಿ, ತೀವ್ರತರದ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ನಾಲ್ಕು ಸುತ್ತುಗಳಲ್ಲಿ ನಡೆಯಲಿದ್ದು, ಮೊದಲನೇ ಸುತ್ತು ಡಿಸೆಂಬರ್ ೨ರಿಂದ ೧೦ರವರೆಗೆ, ಎರಡನೇ ಸುತ್ತು ಜನವರಿ ೩ರಿಂದ ೧೧ರವರೆಗೆ, ಮೂರನೇ ಸುತ್ತು ಫೆಬ್ರುವರಿ ೩ರಿಂದ ೧೧ರವರೆಗೆ ಹಾಗೂ ನಾಲ್ಕನೇ ಸುತ್ತು ಮಾರ್ಚ್ ೨ರಿಂದ ೧೦ರವರೆಗೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ.ಲಕ್ಷಿö್ಮÃಕಾಂತ ಅವರು ಮಾತನಾಡಿ, ಧನುರ್ವಾಯು, ನಾಯಿಕೆಮ್ಮು ಮತ್ತು ಗಂಟಲುಮಾರಿ ರೋಗಗಳನ್ನು ತಡೆಗಟ್ಟಲು ೫-೬ ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಚುಚ್ಚುಮದ್ದು ನೀಡಲಾಗುವುದು. ಧನುರ್ವಾಯು ಮತ್ತು ಗಂಟಲುಮಾರಿ ರೋಗಗಳನ್ನು ತಡೆಗಟ್ಟಲು ೭-೧೬ ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಚುಚ್ಚುಮದ್ದು ನೀಡಲಾಗುವುದು. ಜಿಲ್ಲೆಯಲ್ಲಿ ೧೯ ಗಂಟಲುಮಾರಿ ಪ್ರಕರಣಗಳಿದ್ದು, ಈ ರೋಗ ತ್ವರಿತವಾಗಿ ಹರಡುವುದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು ಎಂದು ಕೋರಿದರು.
ಡಿ.೧೦ರ ವರೆಗೆ ಕುಷ್ಠರೋಗ ಪತ್ತೆ:
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನವು ನವೆಂಬರ್ ೨೫ರಿಂದ ಆರಂಭವಾಗಿದ್ದು, ಡಿಸೆಂಬರ್ ೧೦ರ ವರೆಗೆ ನಡೆಯಲಿದೆ. ಈ ಆಂದೋಲನದಲ್ಲಿ ಆಶಾ ಕಾರ್ಯಕರ್ತೆ ಮತ್ತು ಪುರುಷ ವಾಲೆಂಟೀರ್ ಮನೆಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ರೋಗ ಪತ್ತೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಡಾ.ಮಿಸ್ಬಾ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಪಿ.ವಿಜಯಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಭಾಕರ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...