ವಾಡಿ-ಗದಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನ
ಎಕರೆಗೆ ೧೭ ಲಕ್ಷ ರೂ. ಪರಿಹಾರ ನಿಗದಿ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ನವೆಂಬರ್ ೨೮ (ಕರ್ನಾಟಕ ವಾರ್ತೆ): ವಾಡಿ-ಗದಗ ರೈಲ್ವೆ ಯೋಜನೆಗಾಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ಖಾನಾಪುರ ಎಸ್.ಎಚ್. ಗ್ರಾಮದಲ್ಲಿ ರೈತರಿಂದ ಒಟ್ಟು ೪೧ ಎಕರೆ ೨೨ ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಎಕರೆಗೆ ೧೭ ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಾಡಿ-ಗದಗ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಜಮೀನು ಮಾಲೀಕರೊಂದಿಗೆ ನಡೆದ ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿಯ ಎರಡನೇ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ರೈಲ್ವೆ ಹಾಗೂ ರಾಷ್ಟಿçÃಯ ಹೆದ್ದಾರಿ ಯೋಜನೆಗಳು ಬಂದಷ್ಟು ಜಿಲ್ಲೆ ಅಭಿವೃದ್ಧಿ ಸಾಧಿಸುತ್ತದೆ. ಜಿಲ್ಲೆಯ ಜನರ ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ವರದಾನವಾಗಿದೆ. ಸರಕಾರದ ಭೂಸ್ವಾಧೀನ ಮಾನದಂಡಗಳ ಪ್ರಕಾರ ಈ ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ನಿಗದಿತ ಬೆಲೆಯಂತೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಮತ್ತು ಶೀಘ್ರವಾಗಿ ಹಣ ವರ್ಗಾವಣೆ ಆಗುತ್ತದೆ ಎಂದು ಅವರು ಹೇಳಿದರು.
ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಬಿ.ಶರಣಪ್ಪ ಅವರು ಮಾತನಾಡಿ, ರೈಲ್ವೆ ಯೋಜನೆಗಾಗಿ ವಶಪಡಿಸಿಕೊಂಡ ಜಮೀನು ಸುತ್ತಲಿನಲ್ಲಿ ೫೦ ಫೀಟ್ ವರೆಗೆ ಶಾಲೆ, ವಾಣಿಜ್ಯ ಕಟ್ಟಡ, ಮನೆ ಅಥವಾ ಇತರೆ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಕೃಷಿ ಚಟುವಟಿಕೆ ನಡೆಸಬಹುದು ಎಂದು ಮಾಹಿತಿ ನೀಡಿದರು.
ಖಾನಾಪುರ ಎಸ್.ಎಚ್. ಗ್ರಾಮದ ರೈತರು ಸಭೆಯಲ್ಲಿ ಮಾತನಾಡಿ, ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ ಗುಂಟೆಗಳಷ್ಟು ಉಳಿಯುತ್ತಿದೆ. ಇದರಲ್ಲಿ ಕೃಷಿ ಕಾರ್ಯಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೂ ಅವಕಾಶ ಇರುವುದಿಲ್ಲ. ಉಳಿದ ಅಲ್ಪ ಜಮೀನನ್ನೂ ಕೂಡ ಖರೀದಿ ಮಾಡಬೇಕು ಎಂದು ಕೋರಿದರು.
ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಕೆಐಎಡಿಬಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ