ಸ್ವಸಹಾಯ ಸಂಘಗಳ ಸದಸ್ಯರ ಜೊತೆಗೆ ಅಧಿಕಾರಿಗಳ ಸಂವಾದ
ಮಹಿಳೆಯರಲ್ಲಿ ಆಸಕ್ತಿ ಇದ್ದರೆ ಉದ್ದಿಮೆ ಆರಂಭಿಸಲು ಸಾಧ್ಯ
-ಡಾ.ಗಿರಿಯಪ್ಪ ಕೊಳ್ಳನ್ನವರ
ಯಾದಗಿರಿ, ನವೆಂಬರ್ ೨೧ (ಕರ್ನಾಟಕ ವಾರ್ತೆ): ಸ್ವಸಹಾಯ ಸಂಘಗಳ ಸದಸ್ಯರಲ್ಲಿ ಉತ್ಸುಕತೆ, ಆಸಕ್ತಿ ಇದ್ದರೆ ಉದ್ದಿಮೆ ಆರಂಭಿಸಲು ಸಾಧ್ಯ. ಇದರ ಜೊತೆಗೆ ಮಾರ್ಕೇಟಿಂಗ್ ಆಲೋಚನೆ ಮತ್ತು ಕಲ್ಪನೆಗಳಿರಬೇಕು ಎಂದು ಮೈಸೂರಿನ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆಯ ಮಹಿಳಾ ಸಬಲೀಕರಣ ಕಾರ್ಯ ಯೋಜನಾಧಿಕಾರಿ ಡಾ.ಗಿರಿಯಪ್ಪ ಕೊಳ್ಳನ್ನವರ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಿಎಸ್‌ಐಆರ್- ಕೇಂದ್ರ ಆಹಾರ ಸಂಶೋಧನಾ ಸಂಸ್ಥೆ ಮೈಸೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ಮಹಿಳಾ ಸಬಲೀಕರಣ ಪೂರಕವಾಗಿ ಜಿಲ್ಲೆಯ ಸ್ವಸಹಾಯ ಸಂಘಗಳ ಸದಸ್ಯರ ಜೊತೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರಿನ ಆಹಾರ ಸಂಶೋಧನಾ ಸಂಸ್ಥೆಯು ಆಹಾರ ಕ್ಷೇತ್ರದಲ್ಲಿ ಹಲವಾರು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದ್ದು, ಇವುಗಳಲ್ಲಿ ಕೆಲವನ್ನು ಗ್ರಾಮೀಣ ಮಹಿಳೆಯರ ತರಬೇತಿ ಮತ್ತು ಸಬಲೀಕರಣ ಕಾರ್ಯಯೋಜನೆಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕಲಬೆರಕೆ ಇಲ್ಲದ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಲು ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ರಾಯಚೂರು ಮತ್ತು ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಗಳಾಗಿರುವುದರಿಂದ ಈ ಜಿಲ್ಲೆಗಳ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಲಾಗುತ್ತಿದೆ. ಸಿಎಫ್‌ಟಿಆರ್‌ಐ ಸಂಸ್ಥೆಯ ನಿರ್ದೇಶಕರಾದ ಡಾ.ರಾಘವರಾವ್ ಅವರು ಈ ಯೋಜನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತರಬೇತಿ ಪಡೆಯುವವರಿಗೆ ಪ್ರಯಾಣ ವೆಚ್ಚ, ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಮೊದಲನೇ ಹಂತದಲ್ಲಿ ಮೈಸೂರಿನ ಸಂಸ್ಥೆಯಯಲ್ಲಿ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಹಣ್ಣಿನ ಪಾನೀಯಗಳು, ಹಣ್ಣಿನ ಜಾಮ್ ಮತ್ತು ಜೆಲ್ಲಿ, ಉಪ್ಪಿನಕಾಯಿ ಮತ್ತು ಚಟ್ನಿ ಮುಂತಾದ ಗೃಹೋಪಯೋಗಿ ವಸ್ತುಗಳ ತಯಾರಿಕೆಯನ್ನು ತಿಳಿಸಿಕೊಡಲಾಗಿದೆ. ೨ನೇ ಹಂತದಲ್ಲಿ ಯಾದಗಿರಿ ಜಿಲ್ಲೆಯಲ್ಲಿಯೇ ಮಸಾಲ ಪದಾರ್ಥಗಳ ಕುರಿತು ತರಬೇತಿ ನೀಡಲಾಗಿದ್ದು, ಬರುವ ಜನವರಿ ತಿಂಗಳಲ್ಲಿ ಸಿರಿಧಾನ್ಯಗಳ ಕುರಿತಂತೆ ೩ ದಿನಗಳ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಹೆಸರು ನೋಂದಾಯಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರು ಮಾತನಾಡಿ, ಮಹಿಳೆಯರು ಸ್ಥಳೀಯವಾಗಿ ಸಿಗುವಂತಹ ಕಚ್ಚಾ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಬೇಕು. ಇದಕ್ಕಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಸಂಸ್ಕರಣೆಯ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.೯೦ರಷ್ಟು ಹಾಗೂ ಇತರೆ ಫಲಾನುಭವಿಗಳಿಗೆ ಶೇ.೫೦ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ರೈತರು ನವಣೆ, ಸಾಮೆ ಸಿರಿಧಾನ್ಯಗಳನ್ನು ಬೆಳೆಯುತ್ತಿಲ್ಲ. ಈ ಬೆಳೆಗಳ ಬಗ್ಗೆ ರೈತರು ಒಲವು ತೋರಿ ಬೆಳೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ವತಿಯಿಂದ ಹೆಕ್ಟೇರ್‌ಗೆ ೧೦ ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಿರಿಧಾನ್ಯಗಳನ್ನು ಆಹಾರದಲ್ಲಿ ಉಪಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇವುಗಳಿಂದ ಹೆಚ್ಚಿನ ಪೌಷ್ಟಿಕಾಂಶ ದೊರೆಯುವುದರಿಂದ ಮಾರುಕಟ್ಟೆ ಕೂಡ ಇದೆ. ಮಹಿಳೆಯರು ಕೌಶಲ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಬೆಳ್ಳೇಗೌಡ ಅವರು ಮಾತನಾಡಿ, ಮಹಿಳೆಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಬೇಕು. ಅಧಿಕಾರಿಗಳು ಈ ಬೇಡಿಕೆಗಳಿಗನುಗುಣವಾಗಿ ಇಲಾಖೆಗಳ ಯೋಜನೆಗಳನ್ನು ಹೊಂದಾಣಿಕೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲ ಮರುಪಾವತಿ ಇಡೀ ದೇಶದಲ್ಲಿಯೇ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಆದರೂ ಮಹಿಳೆಯರ ಸಬಲೀಕರಣ ಆಗುತ್ತಿಲ್ಲ. ಇದಕ್ಕೆ ಕಾರಣಗಳನ್ನು ಅರಿತುಕೊಂಡು ಎಲ್ಲಾ ಇಲಾಖೆ ಅಧಿಕಾರಿಗಳು ಒಟ್ಟುಗೂಡಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕಿದೆ. ಸ್ವಸಹಾಯ ಸಂಘಗಳು ಕೂಡ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಗೋಪಾಲ ಅವರು ಮಾತನಾಡಿ, ಮಹಿಳಾ ಸ್ವಸಹಾಯ ಸಂಘ ಅಥವಾ ವೈಯಕ್ತಿಕ ಸಾಲ ಸೌಲಭ್ಯಗಳನ್ನು ನೀಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸುವಂತಿಲ್ಲ. ಒಂದು ವೇಳೆ ವಿಳಂಬ ಅಥವಾ ನಿರಾಕರಿಸಿದರೆ ಲೀಡ್ ಬ್ಯಾಂಕ್ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಗುರುನಾಥ ಎನ್.ಗೌಡಪ್ಪನವರ್, ವಿಜ್ಞಾನಿಗಳಾದ ವಿಜಯಲಕ್ಷಿ, ಡಾ.ಮಾಧವನಾಯ್ಡು ಅವರು ಮಾತನಾಡಿದರು.
ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗಾಧಿಕಾರಿ ಗೋಪಾಲರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ರೇಖಾ ಎನ್.ಮ್ಯಾಗೇರಿ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಶಿವಮಂಗಳಾ, ಸ್ತಿ ಶಕ್ತಿ ಯೋಜನೆಯ ಉಷಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ಧಿ ನಿಗಮದ ಹಣಮಂತ್ರಾಯ ಅವರು ತಮ್ಮ ಇಲಾಖೆಗಳಿಂದ ಮಹಿಳೆಯರಿಗಾಗಿ ಇರುವ ಯೋಜನೆಗಳು ಮತ್ತು ಸಹಾಯಧನದ ಕುರಿತಂತೆ ವಿವರಿಸಿದರು.
ಆಯುಷ್ಮಾನ್ ಕಾರ್ಡ್ ಪಡೆಯಿರಿ: ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಈ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ ೫ ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ ಮತ್ತು ಹೊಂದಿರದ ಕುಟುಂಬಗಳು ೧.೫೦ ಲಕ್ಷ ರೂ.ವರೆಗೂ ಸಹಪಾವತಿ (ಶೆ.೭೦ರಷ್ಟು ಫಲಾನುಭವಿ ಭರಿಸತಕ್ಕದ್ದು, ಶೆ.೩೦ರಷ್ಟು ಸರ್ಕಾರ ಭರಿಸುತ್ತದೆ)ಯೊಂದಿಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಪ್ರತಿಯೊಬ್ಬರು ನೋಂದಾಯಿಸಿ ಯೋಜನೆಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಸಹಾಯ ಸಂಘಗಳ ಮಹಿಳೆಯರಿಂದ ಪಡಿತರ ಚೀಟಿ ಹಾಗೂ ಆಧಾರ್‌ಕಾರ್ಡ್ ಸಂಖ್ಯೆಗಳೊ0ದಿಗೆ ೧೦ ರೂ. ಶುಲ್ಕ ಪಡೆದು ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು. ವಿಜಯಕುಮಾರ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ