ಬುಧವಾರ, ನವೆಂಬರ್ 20, 2019

ಕೃಷ್ಣಾಪುರ: ಆರೋಗ್ಯ ಶಿಕ್ಷಣ ಕಾರ್ಯಕ್ರಮ

ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುರಪುರ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದರ ಶಂಕರ ಮಾತನಾಡಿ, ಸಾಮೂಹಿಕ ಔಷಧ ನುಂಗಿಸುವ (ಎಂ.ಡಿ.ಎ ಮತ್ತು ಏ.ಡಿ.ಎ) ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ವರ್ಷದಲ್ಲಿ ೧ ಬಾರಿ ತಪ್ಪದೇ ಈ ಮಾತ್ರೆಗಳನ್ನು ಸೇವಿಸಬೇಕು. ಮನೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಯಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು. 
ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ (ಎ.ಸಿ.ಎಫ್) ಹಾಗೂ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ (ಎಲ್.ಸಿ.ಡಿ.ಸಿ) ನವೆಂಬರ್ ೨೫ರಿಂದ ಡಿಸೆಂಬರ್ ೧೦ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಇದಕ್ಕಾಗಿ ಶಾಲಾ ವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್ ಅವರು ಮಾತನಾಡಿ, ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವು ಡಿಸೆಂಬರ್ ೧೧ರಿಂದ ೩೧ರವರೆಗೆ ನಡೆಯಲಿದೆ. ೧ನೇ ತರಗತಿಯ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಮಾರಕ ಖಾಯಿಲೆಯಾದ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ಆಗದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಲಸಿಕೆ ನೀಡಲಾಗುವುದು. ೨ರಿಂದ ೧೦ನೇ ತರಗತಿಯ ಮಕ್ಕಳಿಗೆ ಸಹ ಮಾರಕ ರೋಗಗಳನ್ನು ತಡೆಗಟ್ಟಲು ತಪ್ಪದೇ ಟಿ.ಡಿ. ಲಸಿಕೆ ಹಾಕಿಸಲು ತಿಳಿಸಿದರು.
ಎಲ್ಲರೂ ಕೈಜೋಡಿಸಿ ಯಾದಗಿರಿ ಜಿಲ್ಲೆಯನ್ನು ಡಿಪ್ತೀರಿಯಾ ರೋಗಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿಯೊಬ್ಬ ಮಗುವಿನ ಜನ್ಮಸಿದ್ದ ಹಕ್ಕು ಹಾಗೂ ಲಸಿಕೆಗಳನ್ನು ಕೊಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂಬ ಘೋಷಣೆಯೊಂದಿಗೆ ತಿಳಿಸಿಕೊಟ್ಟರು.
ಶಾಲೆಯ ಮುಖ್ಯಗುರುಗಳಾದ ದೇವಿಂದ್ರಮ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿಗಳಾದ ರಾಘುಬಾಯಿ ಕುಲಕರ್ಣಿ, ಸುಮಲತಾ, ಪ್ರೇಮಾ, ರಾಜಶ್ರೀ, ವೀರೇಶ, ರಜನಿ, ಭೀಮಬಾಯಿ, ರೇಣುಕಾ, ಲಕ್ಷಿö್ಮÃ, ಇಮಾಮ್‌ಬಿ, ಶಿವುಕುಮಾರ, ಆಶಾ ಕಾರ್ಯಕರ್ತೆ ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಬಿಮುಲ್ಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...