ವಿವಿಧ ಜಯಂತಿಗಳನ್ನು ಸರಳವಾಗಿ ಆಚರಿಸಲು ನಿರ್ಧಾರ
: ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್.
ಯಾದಗಿರಿ ಫೆ. 09 (ಕ.ವಾ):- ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಇದೇ ಫೆಬ್ರುವರಿ 15 ರಂದು ಶ್ರೀ ಸಂತ ಸೇವಾಲಾಲ್, 19 ರಂದು ಛತ್ರಪತಿ ಶಿವಾಜಿ ಹಾಗೂ ಸವಿತಾ ಮಹರ್ಷಿ, 20 ರಂದು ಸಂತ ಕವಿ ಸರ್ವಜ್ಞ ಅವರ ಜಯಂತಿಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಜಯಂತಿಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುವುದು. ಆಯಾ ಜಯಂತಿ ದಿನಗಳಂದು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಗುತ್ತದೆ ಎಂದರು.
ಜಯಂತಿಯಲ್ಲಿ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಸಮಾಜದ ಮುಖಂಡರ ಸಮ್ಮುಖದಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಜಯಂತಿಯನ್ನು ಸರಳವಾಗಿ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಜರ್ ಉಪಯೋಗಿಸಬೇಕೆಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿಯಾದ ಪ್ರಕಾಶ ಜಿ. ರಜಪೂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ, ವಿವಿಧ ಸಮಾಜದ ಮುಖಂಡರು ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ