ಗುರುವಾರ, ಸೆಪ್ಟೆಂಬರ್ 26, 2019

ಮತದಾರರ ಪರಿಶೀಲನಾ ಕಾರ್ಯಕ್ರಮ
ಮತದಾರರ ಪಟ್ಟಿ ತಿದ್ದುಪಡಿಗೆ ವೋಟರ್  ಹೆಲ್ಪ್ ಲೈನ್ ಆಪ್  ಸಹಕಾರಿ
ಯಾದಗಿರಿ: ಸೆಪ್ಟೆಂಬರ್ ೨೬ (ಕರ್ನಾಟಕ ವಾರ್ತೆ): ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಭಾರತ ಚುನಾವಣಾ ಆಯೋಗ ಪರಿಚಯಿಸಿರುವ ವೋಟರ್ ಹೆಲ್ಪ್ಲೈನ್ ಆ್ಯಪ್ ತುಂಬಾ ಸಹಕಾರಿಯಾಗಿದೆ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಮತದಾರರು ಮನೆಯಲ್ಲಿಯೇ ಕುಳಿತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ ಎಂದು ಜಿಲ್ಲಾ ಮಟ್ಟದ ಮಾಸ್ಟರ್ ಟ್ರೆನರ್ ಹಣಮಂತರಾವ್ ಗೊಂಗ್ಲೆ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪರಿಶೀಲನಾ ಕಾರ್ಯಕ್ರಮದ ಅಂಗವಾಗಿ ವೋಟರ್ ಹೆಲ್ಪ್ಲೈನ್ ಆ್ಯಪ್ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ಚುನಾವಣಾ ಶಾಖೆ, ಕಂಪ್ಯೂಟರ್ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. ತಮ್ಮಲ್ಲಿರುವ ಆ್ಯಂಡ್ರಾಯಿಡ್ ಮೊಬೈಲ್ ಮೂಲಕವೇ ಗುರುತಿನ ಚೀಟಿಯಲ್ಲಿನ ಮತದಾರರ ಪೋಟೋ, ಸ್ವ-ವಿಳಾಸ, ಜನ್ಮ ದಿನಾಂಕ, ವಯಸ್ಸು, ಹೆಸರು, ಲಿಂಗ, ಪೋಷಕರ ಹೆಸರು ತಿದ್ದುಪಡಿ ಮಾಡಬಹುದು. ಹೊಸ ಸೇರ್ಪಡೆಗೂ ಸಹ ಅವಕಾಶ ಕಲ್ಪಿಸಿಕೊಡಲಾಗಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ತಿದ್ದುಪಡಿ ಮಾಡುವಾಗ ಸಂಬಂಧಪಟ್ಟ ಮೂಲ ದಾಖಲಾತಿಯನ್ನು ಅಪ್‌ಲೋಡ್ ಮಾಡುವುದು ಅವಶ್ಯವಿರುತ್ತದೆ. ೦೧-೦೧-೨೦೨೦ಕ್ಕೆ ೧೮ ವರ್ಷ ಪೂರ್ಣಗೊಳಿಸುವ ಅಭ್ಯರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ೧೬ ವರ್ಷ ಮೇಲ್ಪಟ್ಟವರು ಕೂಡ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಇವರನ್ನು ನಿರೀಕ್ಷಿತ ಮತದಾರರು ಎಂದು ಪರಿಗಣಿಸಲಾಗುತ್ತದೆ. ೧೮ ವರ್ಷ ಪೊರ್ಣಗೊಂಡ ನಂತರ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.
ವೋಟರ್ ಹೆಲ್ಪ್ಲೈನ್ ಆ್ಯಪ್‌ನಲ್ಲಿ ಫ್ಯಾಮಿಲಿ ಟ್ಯಾಗ್ ಮಾಡಲು ಅವಕಾಶ ನೀಡಿದ್ದು, ಇದರ ಮೂಲಕ ಒಂದು ಕುಟುಂಬದ ಸದಸ್ಯರು ಬೇರೆ ಬೇರೆ ಪಾರ್ಟ್ಗಳಲ್ಲಿ ಚದುರಿ ಹೋಗದಂತೆ ನೋಡಿಕೊಳ್ಳಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಅಧಿಕಾರಿ ಅರುಣಕುಮಾರ ಕುಲಕರ್ಣಿ, ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಅಜೀತ್ ಜಿ.ನಾಯಕ, ಚುನಾವಣಾ ಶಾಖೆಯ ಶಿರಸ್ತೆದಾರ್ ಪರಶುರಾಮ, ಖಲೀಲ್ ಸಾಬ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...