ಗುರುವಾರ, ಸೆಪ್ಟೆಂಬರ್ 26, 2019

ಕೆ.ವಿ.ಕೆ, ಕಲಿಕೆ ಸಂಸ್ಥೆ ವತಿಯಿಂದ ಶೇಂಗಾ ಬೆಳೆ ಕ್ಷೆತ್ರೊತ್ಸವ
ಶೇಂಗಾ ಉತ್ತಮ ಇಳುವರಿಗೆ ಗುಣಮಟ್ಟದ ಬೀಜ ಬಳಸಿ
--:ಡಾ.ಮಲ್ಲಿಕಾರ್ಜುನ ಕೆಂಗನಾಳ
ಯಾದಗಿರಿ, ಸೆಪ್ಟೆಂಬರ್ ೨೬ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಯಥೇಚ್ಛವಾಗಿ ಶೇಂಗಾ ಬೆಳೆಯಲಾಗುತ್ತಿದ್ದು, ರೈತರು ಹೆಚ್ಚಿನ ಇಳುವರಿ ಪಡೆಯಲು ಉತ್ತಮ ಇಳುವರಿ ನೀಡುವ ಶೇಂಗಾ ಬೀಜದ ಹೊಸ ತಳಿಗಳನ್ನು ಆಯ್ಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ ಅವರು ಸಲಹೆ ನೀಡಿದರು.
ಯಾದಗಿರಿ ತಾಲ್ಲೂಕಿನ ಆಶಾಪೂರ ತಾಂಡಾದಲ್ಲಿ ಮಂಗಳವಾರ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಟಾಟಾ ಟ್ರಸ್ಟ್ನ ಕಲಿಕೆ ಸಂಸ್ಥೆಯ ಫಲಾನುಭವಿ ರೈತರ ಕ್ಷೆತ್ರಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳಲ್ಲಿ ಬೆಳೆದ ಶೇಂಗಾ ಬೆಳೆಯ ವೀಕ್ಷಣೆ ಮತ್ತು ಬೆಳೆದ ರೈತರ ಅನಿಸಿಕೆಗಳನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳುವ ಉದ್ದೆಶದಿಂದ ಹಮ್ಮಿಕೊಂಡಿದ್ದ ಶೇಂಗಾ ಬೆಳೆಯ ಕ್ಷೆತ್ರೊತ್ಸವದಲ್ಲಿ ಅವರು ಮಾತನಾಡಿದರು.
ಶೇಂಗಾ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು ಮುಂಗಾರು, ಹಿಂಗಾರು ಮತ್ತು ಬೇಸಿಗೆ ಮೂರು ಹಂಗಾಮುಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರ ಕ್ಷೆತ್ರಗಳಲ್ಲಿ ಜಿ೨-೫೨ ಹೊಸ ಶೇಂಗಾ ತಳಿಯನ್ನು ಪ್ರಾಯೋಗಿಕವಾಗಿ ಬೆಳೆದ ರೈತರ ಅನುಭವಗಳನ್ನು ಮತ್ತು ಅವರ ಅನಿಸಿಕೆಗಳನ್ನು ತಿಳಿಯಲು ಶೇಂಗಾ ಬೆಳೆಯ ಕ್ಷೆತ್ರೊತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಿತ್ತನೆ ಮಾಡುವ ಮುಂಚೆ ಬೀಜೋಪಚಾರ ಮಾಡಬೇಕು. ಸಾಧ್ಯವಾದಷ್ಟು ಸಾವಯವ ಗೊಬ್ಬರಗಳಾದ ಸಗಣಿ ಮತ್ತು ತಿಪ್ಪೆ ಗೊಬ್ಬರಗಳನ್ನು ಬಳಸಬೇಕು. ಲಘು ಪೋಷಕಾಂಶಗಳಾದ ಸತುವು, ಕಬ್ಬಿಣ ಮತ್ತು ಗಂಧಕಗಳನ್ನು ಹಾಕುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಜೈವಿಕ ಪೀಡೆನಾಶಕಗಳನ್ನು ಬಳಸಬೇಕೆಂದು ಕರೆ ನೀಡಿದರು.
ಟಾಟಾ ಟ್ರಸ್ಟ್ನ ಕಲಿಕೆ ಸಂಸ್ಥೆಯ ಅರುಣಕುಮಾರ ಅವರು ಮಾತನಾಡಿ, ರೈತರು ತಮ್ಮ ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯ. ಅದರಲ್ಲೂ ಖರ್ಚು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಕಾಳಜಿ ವಹಿಸಿದಲ್ಲಿ ಮಾತ್ರ ಜೀವಿಗಳ ಉಳಿವಿಗೆ ಒಳ್ಳೆಯದು ಎಂದು ತಿಳಿಸಿದರು.
ರೈತರು ಕಡಿಮೆ ವೆಚ್ಚದ ಬೀಜೋಪಚಾರ, ಮೋಹಕ ಬಲೆಗಳು ಮತ್ತು ಜೈವಿಕ ಪೀಡೆನಾಶಕಗಳು ಮುಂಜಾಗ್ರತಾ ಕ್ರಮವಾಗಿ ಬಳಸಿದಲ್ಲಿ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ಸಂರಕ್ಷಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತರು ಶೇಂಗಾ ಬೆಳೆಯ ಬೇಸಾಯದಲ್ಲಿ ವಿವಿಧ ಹಂತದಲ್ಲಿ ಕಂಡುಬರುವ ಸಮಸ್ಯೆಗಳನ್ನು ಚರ್ಚಿಸಿ ಸಲಹೆಗಳನ್ನು ಪಡೆದುಕೊಂಡರು. ಬೆಳೆಗಳಿಗೆ ಕ್ರಿಮಿನಾಶಕಗಳನ್ನು ಸಿಂಪರಣೆ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಸುರಕ್ಷಾ ಕವಚದ ಬಳಕೆಯ ಕುರಿತು ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು.
ಕಲಿಕೆ ಸಂಸ್ಥೆಯ ಆನಂದ, ಶಾಂತನಗೌಡ, ಸಿದ್ದಪ್ಪ ಮತ್ತು ಸಾಯಬರೆಡ್ಡಿ ಹಾಗೂ ೫೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...