ಬುಧವಾರ, ಸೆಪ್ಟೆಂಬರ್ 25, 2019

ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ
ಅಪೌಷ್ಟಿಕತೆ ನಿವಾರಣೆಗೆ ಅಲ್ಬೆಂಡಾಜೋಲ್ ಮಾತ್ರೆ ಸಹಾಯಕ
-ಜಿ.ಪಂ ಸಿಇಒ ಶಿಲ್ಪಾ ಶರ್ಮಾ
ಯಾದಗಿರಿ: ಸೆಪ್ಟೆಂಬರ್ ೨೫, (ಕರ್ನಾಟಕ ವಾರ್ತೆ): ಮಕ್ಕಳ ಅಪೌಷ್ಟಿಕತೆ ನಿವಾರಣೆಯಲ್ಲಿ ಜಂತುಹುಳ ನಾಶಕ ಅಲ್ಬೆಂಡಾಜೋಲ್ ಮಾತ್ರೆಯು ತುಂಬಾಸಹಕಾರಿಯಾಗಿದೆ. ಪ್ರತಿಯೊಬ್ಬ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ಚೀಪಲು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮನವಿ ಮಾಡಿದರು.
ನಗರದ ಗಾಂಧಿ ವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಸಂಘ (ಆರ್‌ಸಿಎಚ್ ವಿಭಾಗ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೨೫ರಂದು ೧ ವರ್ಷದಿಂದ ೧೯ ವರ್ಷದ ಎಲ್ಲಾ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಶಾಲೆ- ಕಾಲೇಜುಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಬಾಕಿ ಉಳಿದ ಮಕ್ಕಳಿಗೆ ಸೆಪ್ಟೆಂಬರ್ ೩೦ರ ಮಾಪ್‌ಅಪ್ ದಿನದಂದು ಅಲ್ಬೆಂಡಾಜೋಲ್ ಮಾತ್ರೆ ನೀಡಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ಯಾದಗಿರಿ ಜಿಲ್ಲೆಯಲ್ಲಿ ೩,೪೫,೨೫೪ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡುವ ಗುರಿ ಇದೆ. ಜಂತುಹುಳು ನಾಶಕ ಮಾತ್ರೆಯು ಎಲ್ಲಾ ಮಕ್ಕಳಿಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ರಾಷ್ಟಿçÃಯ ಜಂತುಹುಳ ನಿವಾರಣಾ ದಿನದಂದು ಈ ಔಷಧಿ ತೆಗೆದುಕೊಳ್ಳಲು ಶಿಫಾರಸು ಮಾಡಿವೆ. ಅಲ್ಬೆಂಡಾಜೋಲ್ ಮಾತ್ರೆ ಚೀಪುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ ಮತ್ತು ಪೋಷಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ನಿಶಕ್ತ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಸೇರಿದಂತೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ೧-೨ ವರ್ಷ ಮಕ್ಕಳಿಗೆ ಅರ್ಧ ಮಾತ್ರೆ (೪೦೦ ಎಂ.ಜಿ), ೨-೧೯ ವರ್ಷದ ಮಕ್ಕಳಿಗೆ ೧ ಮಾತ್ರೆ (೪೦೦ ಎಂ.ಜಿ) ನೀಡಿ ಸರಿಯಾಗಿ ಚೀಪಲು ತಿಳಿಸಬೇಕು. ಯಾವುದೇ ಕಾರಣಕ್ಕೂ ಇದನ್ನು ನುಂಗಬಾರದು. ನುಂಗಿದರೆ ಮಾತ್ರೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಅನಾರೋಗ್ಯ ಪೀಡಿತ ಅಥವಾ ಬೇರೆ ಔಷಧಿ ತೆಗೆದುಕೊಂಡ ಮಕ್ಕಳಿಗೆ ಈ ಜಂತುಹುಳ ನಾಶಕ ಮಾತ್ರೆಗಳನ್ನು ನೀಡಬಾರದು ಎಂದು ತಿಳಿಸಿದರು.
ಅಲ್ಬೆಂಡಾಜೋಲ್ ಮಾತ್ರೆಯನ್ನು ಮಕ್ಕಳಿಗೆ ನೀಡುವುದರಿಂದ ದುಂಡು ಹುಳು, ಟೇಪ್ ಹುಳು ಮತ್ತು ಕೊಕ್ಕೆ ಹುಳುಗಳನ್ನು ಹೋಗಲಾಡಿಸುವುದಲ್ಲದೆ ಅನೀಮಿಯಾ ಖಾಯಿಲೆಯನ್ನು ತಡೆಗಟ್ಟಬಹುದಾಗಿರುತ್ತದೆ. ಪೋಷಕಾಂಶ ಸೇವನೆಯನ್ನು ವೃದ್ಧಿಸುತ್ತದೆ. ಏಕಾಗ್ರತೆ, ಕಲಿಕಾ ಸಾಮರ್ಥ್ಯ ಮತ್ತು ಶಾಲೆಯ, ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಈ ಮೂಲಕ ಮಕ್ಕಳು ಮಾನಸಿಕ ಮತ್ತು ಶಾರೀರಿಕವಾಗಿ ದೃಢಕಾಯರಾಗಿರುತ್ತಾರೆ ಎಂದು ಹೇಳಿದರು
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಅವರು ಮಾತನಾಡಿ, ಶೌಚಾಲಯ ಬಳಕೆ ಮಾಡದಿರುವುದರಿಂದ ಮಕ್ಕಳಲ್ಲಿ ಹೆಚ್ಚಾಗಿ ಜಂತುಹುಳು ಕಂಡುಬರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯವನ್ನು ಬಳಸಬೇಕು. ಶೌಚದ ಬಳಿಕ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಮನೆಯ ಸುತ್ತಲು ನೈರ್ಮಲ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ಅಲ್ಬೆಂಡಾಜೋಲ್ ಮಾತ್ರೆಯನ್ನು ತೆಗೆದುಕೊಂಡ ನಂತರ ಮಕ್ಕಳಲ್ಲಿ ಕೆಲವೊಮ್ಮೆ ವಾಕರಿಕೆ, ಸೌಮ್ಯ ಹೊಟ್ಟೆ ನೋವು, ವಾಂತಿಯಾಗುವುದು, ಅತಿಸಾರ ಹಾಗೂ ಬಳಲಿಕೆ ಕಂಡುಬರಬಹುದು. ಅವರು ಜಂತುಹುಳುಗಳನ್ನು ಹೊಂದಿದ್ದಲ್ಲಿ ಇವುಗಳನ್ನು ನಿರೀಕ್ಷಿಸಬಹುದು. ಆದರೆ, ಯಾವುದೇ ಗಾಬರಿಯಾಗಬೇಡಿ. ಯಾವುದೇ ವೈದ್ಯಕೀಯ ನೆರವಿಗಾಗಿ ಉಚಿತ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಂಪರ್ಕಿಸಲು ಅವರು ಕೋರಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದ ಪಾಟೀಲ ಅವರು ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ರಾಷ್ಟ್ರೀಯ ವ್ಯವಸ್ಥಾಪಕ ರನಪಾಲ್ ಸಿಂಗ್ ಅವರು ಮಾತನಾಡಿದರು. ಸಿಪಿಐ ಶರಣಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾವೇರಿ, ದಿವ್ಯಾ ಅವರು ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಅವರು ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ಅವರು ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...