ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಯಾದಗಿರಿ, ಸೆಪ್ಟೆಂಬರ್ ೨೪ (ಕರ್ನಾಟಕ ವಾರ್ತೆ): ಹೊನಗೇರಾ ಗ್ರಾಮದಲ್ಲಿ ಇತ್ತಿಚೆಗೆ “ಪೋಷಣ್ ಅಭಿಯಾನ” ಯೋಜನೆಯಡಿ ಪೌಷ್ಟಿಕ ಆಹಾರ ಶಿಬಿರ, ಸೀಮಂತ ಕಾರ್ಯಕ್ರಮ, ಅನ್ನಪ್ರಾಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಾಜಿದ್ ಅವರು ಪೋಷಣ್ ಅಭಿಯಾನದ ಮಾಸಾಚರಣೆ ಮಹತ್ವ, ಗರ್ಭಿಣಿ- ಬಾಣಂತಿ ಆರೈಕೆ, ಪೌಷ್ಟಿಕ ಆಹಾರದ ಮಹತ್ವ ಹಾಗೂ ಸ್ಥಳೀಯವಾಗಿ ಸಿಗುವ ಆಹಾರ ಸಾಮಗ್ರಿಗಳ ಮಹತ್ವವನ್ನು ತಿಳಿಸಿದರು.
ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ಕೆ.ಎಂ.ನದಾಫ್ ಅವರು ಇಲಾಖೆ ಯೋಜನೆ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ೮ ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಸ್ತ್ರೀ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶರಣಮ್ಮ, ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ, ಆರೋಗ್ಯ ಸಹಾಯಕ ತಾಯಪ್ಪ, ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹಣಮಂತ ಅವರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳ ತಾಯಂದಿರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪೋಲಿಯೊ ವದಂತಿಗೆ ಕಿವಿಕೊಡಬೇಡಿ
ಯಾದಗಿರಿ, ಸೆಪ್ಟೆಂಬರ್ ೨೪ (ಕರ್ನಾಟಕ ವಾರ್ತೆ): ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್‌ನಲ್ಲಿ ಪೋಲಿಯೊ ಲಸಿಕೆ ಕುರಿತು ಹರಿದಾಡುತ್ತಿರುವ ವದಂತಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಅವರು ಮನವಿ ಮಾಡಿದ್ದಾರೆ.
“ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕಿಸಬಾರದು. ಈ ಲಸಿಕೆಯಲ್ಲಿ ವೈರಸ್ ಬೆರೆತಿರುತ್ತದೆ. ಪೋಲಿಯೊ ಲಸಿಕೆ ತಯಾರು ಮಾಡಿದ ಕಂಪನಿಯ ಮಾಲೀಕನನ್ನು ಬಂಧಿಸಲಾಗಿದೆ” ಎಂಬ ಸುಳ್ಳು ವದಂತಿಯನ್ನು ವಾಟ್ಸ್ಆ್ಯಪ್‌ನಲ್ಲಿ ಹರಡಲಾಗಿದೆ. ಈ ಆಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪೋಲಿಯೊ ಲಸಿಕೆಯನ್ನು ೧೯೯೫ರಿಂದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಯಶಸ್ವಿಯಾಗಿ ನಡೆದುಕೊಂಡು ಬಂದಿರುತ್ತದೆ. ಈ ಪ್ರಯತ್ನದಿಂದಾಗಿ ೨೦೧೩ರಲ್ಲಿ ಭಾರತ ದೇಶವು ಪೋಲಿಯೊ ಮುಕ್ತ ದೇಶವಾಗಿದೆ. ಪೋಲಿಯೊ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಇದರ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕ ಪಡದೆ ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ತಪ್ಪದೇ ಹಾಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ದರಪಟ್ಟಿ ಆಹ್ವಾನ
ಯಾದಗಿರಿ, ಸೆಪ್ಟೆಂಬರ್ ೨೪ (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆ ಯಾದಗಿರಿ ಸಹಾಯಕ ನಿರ್ದೇಶಕರ ಕಚೇರಿಗೆ ದೈನಂದಿನ ಕೆಲಸ ಕಾರ್ಯಗಳಿಗೆ ಬಾಹ್ಯ ಮೂಲದ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಹಾಗೂ ಗ್ರೂಪ್ “ಡಿ” ಸಿಬ್ಬಂದಿಗಳ ಸೇವೆಯನ್ನು ಒದಗಿಸಲು ಅರ್ಹ ಏಜೆನ್ಸಿಗಳಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಮ್ಯಾನ್ ಪವರ್ ಏಜೆನ್ಸಿಯವರು ಸೆಪ್ಟೆಂಬರ್ ೨೪ರಿಂದ ಸೆ.೩೦ರ ವರೆಗೆ ದರಪಟ್ಟಿಗಳನ್ನು ಪಡೆದು, ಸೆಪ್ಟೆಂಬರ್ ೩೦ರಂದು ಬೆಳಿಗ್ಗೆ ೧೧ ಗಂಟೆಯೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಅದೇ ದಿನಾಂಕದಂದು ಮಧ್ಯಾಹ್ನ ೧ ಗಂಟೆಗೆ ದರಪಟ್ಟಿಗಳನ್ನು ತೆರೆಯಲಾಗುವುದು. ಬಾಹ್ಯ ಮೂಲದ ಆಧಾರದ ಮೇಲೆ ಸಿಬ್ಬಂದಿಗಳ ಸೇವೆಯನ್ನು ಒಂದು ವರ್ಷದವರೆಗೆ ಪಡೆಯಲು ಪರಿಷ್ಕೃತ ದರ ಹಾಗೂ ಕಾಲಮಿತಿ, ಸರ್ಕಾರದ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ