ಇಂದು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಯಾದಗಿರಿ, ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 19ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಶರಣಪ್ಪ ಮಟ್ಟೂರ. ಬಿ.ಜಿ ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದ ಪಾಟೀಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚೋಲ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು ಆಹ್ವಾನಿತರಾಗಿ ಭಾಗವಹಿಸುವರು.
ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತರ ಪ್ರವಾಸ
ಯಾದಗಿರಿ, ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತರಾದ ವಿ.ಎಸ್.ಬಸವರಾಜು ಅವರು ಸೆಪ್ಟೆಂಬರ್ 20 ಮತ್ತು 21ರಂದು ಜಿಲ್ಲೆಯ ಪ್ರವಾಸ ಕೈಗೊಳ್ಳುವರು.
ಸೆ.20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿಕಲಚೇತನರ ಸಮಸ್ಯೆಗಳ ಕುರಿತಾದ ಕುಂದು ಕೊರತೆ ವಿಚಾರಣೆ, ಸ್ವೀಕರಿಸಲಾದ ದೂರುಗಳು, ವಿಲೇ ಮಾಡಿದ ದೂರುಗಳ ಕುರಿತು ಕುಂದುಕೊರತೆ ಸಭೆ ನಡೆಸುವರು.
ಸೆ.21ರಂದು ಬೆಳಿಗ್ಗೆ 9.30 ಗಂಟೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಬಗ್ಗೆ ಅರಿವು ಮೂಡಿಸುವುದು, ಅಂಗವಿಕಲ ವ್ಯಕ್ತಿಗಳ ಅಧಿನಿಯಮ- 1995ರ ಅನುಷ್ಠಾನ ಮತ್ತು ಅಂಗವಿಕಲರ ಮಕ್ಕಳ ರಕ್ಷಣೆಯ ಕುರಿತು, ಶಿಕ್ಷಣ ಇಲಾಖೆಯಲ್ಲಿ ಅಂಗವಿಕಲ ಮಕ್ಕಳ ಶಿಕ್ಷಣ, ಪುನಶ್ಚೇತನ ಮತ್ತು ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಕುರಿತು ಹಾಗೂ ಶೇ.5ರಷ್ಟು ಆಯವ್ಯಯ, ಖರ್ಚು ಹಾಗೂ 2018-19ರ ಕ್ರಿಯಾಯೋಜನೆ ಕುರಿತು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಬಗ್ಗೆ ಅರಿವು ಮೂಡಿಸುವುದು ಹಾಗೂ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಕುರಿತು ಚರ್ಚಿಸಿ, ಪರಿಶೀಲನೆ ನಡೆಸುವರು. ಸದರಿ ವಿಷಯಗಳ ಕುರಿತಂತೆ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2.45 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವರು.
ಗರ್ಭಿಣಿಯರು ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಿ
-ಜಿ.ಪಂ ಸದಸ್ಯ ಶಿವಲಿಂಗಪ್ಪ ಪುಟಗಿ
ಯಾದಗಿರಿ, ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಗರ್ಭಿಣಿಯರು ಸದೃಢವಾಗಿದ್ದರೆ ಆರೋಗ್ಯವಂತ ಮಕ್ಕಳು ಜನಿಸಲು ಸಾಧ್ಯ. ಆದ್ದರಿಂದ ನಿಮ್ಮ ಕೆಲಸಕ್ಕೆ ಎಷ್ಟು ಮಹತ್ವ ನೀಡುತ್ತಿರೊ, ಅಷ್ಟೇ ಮಹತ್ವ ನಿಮ್ಮ ಆರೋಗ್ಯ ಮತ್ತು ಸ್ವಚ್ಛತೆಗೆ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಹೇಳಿದರು.
ಯಡ್ಡಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ “ಪೋಷಣ್ ಅಭಿಯಾನ” ಯೋಜನೆಯಡಿ ಪೌಷ್ಟಿಕ ಆಹಾರ ಶಿಬಿರ, ಸೀಮಂತ ಕಾರ್ಯಕ್ರಮ ಹಾಗೂ ಗರ್ಭಿಣಿ, ಬಾಣಂತಿ, ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಗ್ರಾಮೀಣ ಮಹಿಳೆಯರಿಗಾಗಿ ಅವರ ಆರೋಗ್ಯ ದೃಷ್ಟಿಯಿಂದ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಹಣಮಂತರೆಡ್ಡಿ ಅವರು ಮಾತನಾಡಿ, ಗರ್ಭಿಣಿ, ಬಾಣಂತಿಯರು ಪ್ರತಿದಿನ ತಮ್ಮ ಊಟದಲ್ಲಿ ತರಕಾರಿಗಳು, ಹಣ್ಣುಗಳು, ಮೊಳಕೆಕಾಳು, ಮೊಟ್ಟೆ, ಹಾಲು, ಮೊಸರು ಇರುವಂತೆ ನೋಡಿಕೊಳ್ಳಬೇಕು. ಕಬ್ಬಿಣಾಂಶ ಹೆಚ್ಚಿರುವಂತಹ ಆಹಾರ ಪದಾರ್ಥಗಳ ಸೇವನೆ ಮಾಡಬೇಕು. ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಮಾತೃ ಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರದಲ್ಲಿ ನೀಡುತ್ತಿರುವ ಅನ್ನ, ತರಕಾರಿಯುಕ್ತ ಸಾಂಬಾರು, ಹಾಲು, ಮೊಟ್ಟೆ, ಶೇಂಗಾದ ಚಿಕ್ಕಿಯನ್ನು ಸೇವಿಸಬೇಕು ಎಂದು ತಿಳಿಸಿದರು.
ಗರ್ಭಿಣಿಯರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು. ಗರ್ಭಿಣಿ ಮತ್ತು ಮಕ್ಕಳ ಚುಚ್ಚುಮದ್ದುಗಳ ಕುರಿತು ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬೆಂಡಿಗೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ಮೊದಲನೇ ಹೆರಿಗೆಗೆ 3 ಕಂತುಗಳಲ್ಲಿ ಸರಕಾರದಿಂದ 5000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಮೊದಲನೇ ಮತ್ತು ಎರಡನೇ ಗರ್ಭಿಣಿ/ ಬಾಣಂತಿಯರಿಗೆ ಸರಕಾರದಿಂದ 6000 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದ್ದರಿಂದ ಅರ್ಹ ಗರ್ಭಿಣಿ, ಬಾಣಂತಿಯರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹತ್ತಿಕುಣಿ ವೈದ್ಯಾಧಿಕಾರಿ ರಾಮಕೃಷ್ಣರೆಡ್ಡಿ ಅವರು ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಗರ್ಭಿಣಿಯರಿಗೆ ಪ್ರೊಟೀನ್ ಪೌಡರ್, ಕಬ್ಬಿಣಾಂಶ ಮಾತ್ರೆ, ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಬಾಯಿ ಚವ್ಹಾಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನುರಾಧಾ ಬಂದಳ್ಳಿಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಭೀಮರಾಯ, ಶಾಲಾ ಮುಖ್ಯಶಿಕ್ಷಕಿ ಶೀಲಾಬಾಯಿ, ಸಹಶಿಕ್ಷಕ ಬಸವರಾಜ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಅಮರಗುಂಡೇಶ್ವರಿ, ಹಣಮಂತ, ಅಂಗನವಾಡಿ ಕಾರ್ಯಕರ್ತೆಯರಾದ ಕ್ಯಾದಿಗಮ್ಮ, ಅನಿತಾ, ಸುನಂದಾ, ಸುನಿತಾ ಹಾಜರಿದ್ದರು.
ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ಸೀಮಂತ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಪ್ರಾಥನಾ ಗೀತೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ಕವಿತಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಕವಿತಾ ಕುಲಕರ್ಣಿ ನಿರೂಪಣೆ ಮಾಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ