ಸೋಮವಾರ, ಸೆಪ್ಟೆಂಬರ್ 23, 2019

ನೆರೆ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗೆ ಸಲಹೆ
ಯಾದಗಿರಿ: ಸೆಪ್ಟೆಂಬರ್ ೨೩ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕಳೆದ ತಿಂಗಳು ನೆರೆ ಹಾವಳಿಯಿಂದ ಕೃಷ್ಣಾ ಮತ್ತು ಭೀಮಾ ನದಿಪಾತ್ರದ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಹಾನಿಯಾಗಿರುತ್ತದೆ. ಈ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೈತರು ಭತ್ತದ ಗದ್ದೆಗಳಲ್ಲಿ ಪರ್ಯಾಯವಾಗಿ ಮತ್ತೆ ಭತ್ತವನ್ನು ಬೆಳೆಯಲು ಮುಂದಾದರೆ ಹತ್ತಿ ಮತ್ತು ತೊಗರಿ ಬೆಳೆಗಳು ಹಾನಿಯಾದ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಅನಿವಾರ್ಯವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ ಅವರು ಸಲಹೆ ನೀಡಿದರು.
ಶಹಾಪೂರ ತಾಲ್ಲೂಕಿನ ಕೃಷ್ಣಾ ನದಿ ಪ್ರವಾಹದಿಂದ ಬೆಳೆ ಹಾನಿಯಾಗಿರುವ ಕೊಳ್ಳೂರ ಎಂ. ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪರ್ಯಾಯ ಬೆಳೆಗಳ ಬೇಸಾಯ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭತ್ತ, ಹತ್ತಿ, ತೊಗರಿ ಹಾಗೂ ಮತ್ತಿತರೆ ಬೆಳೆಗಳು ಮುಳುಗಡೆಯಾದಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ಈಗ ಸರಿಯಾದ ಸಮಯವಾಗಿದೆ. ಅದರಲ್ಲಿ ಪ್ರಮುಖವಾಗಿ ಕಪ್ಪು ಮಣ್ಣಿನ ಭೂಮಿಗಳಲ್ಲಿ ಬಿಳಿಜೋಳ, ಕಡಲೆ, ಅಗಸಿ ಮತ್ತು ಕುಸುಬೆ ಬೆಳೆಯಲು ಸೂಕ್ತವಾಗಿದೆ. ಇದರೊಂದಿಗೆ ಹಿಂಗಾರು ಸೂರ್ಯಕಾಂತಿ ಬೆಳೆಯನ್ನೂ ಸಹ ಬೆಳೆಯಬಹುದು. ನೀರಾವರಿ ವ್ಯವಸ್ಥೆ ಇರುವ ರೈತರು ಹೈಬ್ರಿಡ್ ಜೋಳ, ಸಜ್ಜೆ, ಶೇಂಗಾ ಮತ್ತು ಸೂರ್ಯಕಾಂತಿ ಬೆಳೆ ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಕೆಂಪು ಭೂಮಿಯಲ್ಲಿ ಶೇಂಗಾ, ಸಜ್ಜೆ ಮತ್ತು ಗೋವಿನಜೋಳ ಬೆಳೆಯುವುದು ಒಳ್ಳೆಯದು. ರೈತರು ಕೃಷಿ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ತಿಳಿದುಕೊಳ್ಳಬೇಕು. ಲಭ್ಯವಿರುವ ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಬೀಜಗಳನ್ನು ಪಡೆಯಬೇಕು. ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಜೈವಿಕ ಪೀಡೆನಾಶಕಗಳನ್ನು ಬಳಸಿ ಬೇಸಾಯದ ಖರ್ಚು ಕಡಿಮೆ ಮಾಡಿಕೊಳ್ಳಲು ಸಲಹೆ ನೀಡಿದರು.
ರೈತರು ಬೆಳೆಗಳಿಗೆ ಬಳಸುವ ಕೀಟನಾಶಕಗಳನ್ನು ಅದರಲ್ಲಿ ಪ್ರಮುಖವಾಗಿ ಹತ್ತಿ, ಭತ್ತ ಮತ್ತು ತೊಗರಿ ಬೆಳೆಯಲ್ಲಿ ಹೆಚ್ಚು ಜಾಗರೂಕವಾಗಿ ಬಳಸಬೇಕು. ಸಿಂಪರಣೆ ಮಾಡುವಾಗ ಸುರಕ್ಷಾ ಕವಚ ಅಥವಾ ಉಡುಪು ಬಳಸಿ ಸಿಂಪರಣೆ ಮಾಡಲು ಹೇಳಿದರು. ಇದರೊಂದಿಗೆ ಶಿಫಾರಿಸಿದ ಪೀಡೆನಾಶಕಗಳನ್ನು ಮಾತ್ರ ಬಳಸಲು ರೈತರಿಗೆ ಕರೆ ನೀಡಿದರು.
ತರಬೇತಿಯಲ್ಲಿ ಸುಮಾರು ೬೦ಕ್ಕೂ ಹೆಚ್ಚು ರೈತರು ಭಾಗವಹಿಸಿ ಮಾಹಿತಿ ಪಡೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...