ಸೋಮವಾರ, ಸೆಪ್ಟೆಂಬರ್ 23, 2019

ಜಿಲ್ಲಾ ಆಸ್ಪತ್ರೆ, ನಗರಸಭೆಗೆ ಸಚಿವ ಪ್ರಭು ಬಿ.ಚವ್ಹಾಣ್ ಅನಿರೀಕ್ಷಿತ ಭೇಟಿ
ಮೂಳೆತಜ್ಞ, ಫಾರ್ಮಾಸಿಸ್ಟ್, ನಗರಸಭೆ ಎಇ ಅಮಾನತಿಗೆ ಶಿಫಾರಸು
ಯಾದಗಿರಿ: ಸೆಪ್ಟೆಂಬರ್ ೨೧ (ಕರ್ನಾಟಕ ವಾರ್ತೆ): ಪಶುಸಂಗೋಪನೆ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಜಿಲ್ಲಾ ಆಸ್ಪತ್ರೆ ಹಾಗೂ ಯಾದಗಿರಿ ನಗರಸಭೆಗೆ ಶನಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಕೆಲಸಕ್ಕೆ ಸರಿಯಾಗಿ ಹಾಜರಾಗದ ಜಿಲ್ಲಾ ಆಸ್ಪತ್ರೆಯ ಮೂಳೆತಜ್ಞ ಡಾ.ಸುನೀಲ್, ಫಾರ್ಮಾಸಿಸ್ಟ್ ಗೋವಿಂದಮೂರ್ತಿ ಹಾಗೂ ಅನಧಿಕೃತ ಗೈರು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷö್ಯ ತೋರಿದ ಕಾರಣಕ್ಕೆ ನಗರಸಭೆಯ ಸಹಾಯಕ ಇಂಜಿನಿಯರ್ ಶಿವರಾಜ ಸುಂಧಾಳೆ ಅವರಿಗೆ ನೋಟಿಸ್ ನೀಡಿ, ಅಮಾನತು ಮಾಡಲು ಶಿಫಾರಸು ಮಾಡಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಮಹಿಳಾ ಸರ್ಜಿಕಲ್ ವಾರ್ಡ್, ಪುರುಷರ ಸರ್ಜಿಕಲ್ ವಾರ್ಡ್, ನವಜಾತ ಶಿಶುಗಳ ವಾರ್ಡ್ ಹಾಗೂ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದರು. ಅಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಬಂದಿದ್ದ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು.
ವೈದ್ಯರು ಮತ್ತು ಸಿಬ್ಬಂದಿಗಳ ಹಾಜರಾತಿಯನ್ನು ಈ ಸಂದರ್ಭದಲ್ಲಿ ಸುದೀರ್ಘವಾಗಿ ಪರಿಶೀಲಿಸಿದ ಸಚಿವರು, ಸಮಯಕ್ಕೆ ಸರಿಯಾಗಿ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆಯೇ ಬೆಳಿಗ್ಗೆ ಮತ್ತು ಮಧ್ಯಾಹ್ನದ ಹಾಜರಾತಿ ಹಾಕಿ ಮಧ್ಯಾಹ್ನ ಕೆಲಸ ನಿರ್ವಹಿಸದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ನಾರಾಯಣಪ್ಪ ಅವರಿಗೆ ಸೂಚಿಸಿದರು.
ಆಸ್ಪತ್ರೆಯ ಬ್ಲಾಕ್‌ವೊಂದರಲ್ಲಿ ಅವಧಿ ಮುಗಿದ ಔಷಧಗಳು, ಗ್ಲೌಸ್‌ಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಕಂಡು ಕೆಂಡಾಮಂಡಲರಾದ ಸಚಿವರು, ಪ್ರಧಾನಮಂತ್ರಿಗಳು ಪ್ರತಿದಿನ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿ ಎಂದು ಕರೆ ನೀಡುತ್ತಿದ್ದಾರೆ. ಬ್ಲಾಕ್‌ನಲ್ಲಿ ಬಿಸಾಡಿರುವ ಬಕೀಟ್ ಮತ್ತು ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳುವ ನೀವು ಜಿಲ್ಲಾ ಆಸ್ಪತ್ರೆಯ ಪರಿಸರವನ್ನೆÃ ಸ್ವಚ್ಛವಾಗಿಟ್ಟುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಗರಸಭೆಗೆ ಭೇಟಿ: ಯಾದಗಿರಿ ನಗರಸಭೆ ಕಚೇರಿಗೂ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು, ಅಧಿಕಾರಿಗಳು ವೈದ್ಯರು ಮತ್ತು ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದರು. ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು. ಎಸ್‌ಸಿ/ಎಸ್‌ಟಿ ಅನುದಾನವನ್ನು ಸದ್ಬಳಕೆ ಮಾಡಬೇಕು. ನಗರದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಬಾಕಿ ಇರುವ ಮುಟೇಷನ್ ಕೆಲಸವನ್ನು ತಿಂಗಳಲ್ಲಿ ಪೂರ್ಣಗೊಳಿಸಿ, ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರುಪಡಿಸುವಂತೆ ಪೌರಾಯುಕ್ತರಾದ ರಮೇಶ ಸುಣಗಾರ ಅವರಿಗೆ ಸೂಚಿಸಿದರು.
ವಾರ್ತಾ ವಾಹನದಲ್ಲಿ ಸಂಚಾರ: ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನದಲ್ಲಿ ಪತ್ರಕರ್ತರೊಂದಿಗೆ ಸಂಚರಿಸಿ ಜಿಲ್ಲಾ ಆಸ್ಪತ್ರೆ ಹಾಗೂ ನಗರಸಭೆಗೆ ಭೇಟಿ ನೀಡಿದರು. ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರು ಕೂಡ ಸಚಿವರೊಂದಿಗೆ ವಾರ್ತಾ ವಾಹನದಲ್ಲಿ ಸಂಚರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...