ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ
ನೆರೆಹಾನಿಗೊಳಗಾದ ಶಾಲೆಗಳ ತುರ್ತು ದುರಸ್ತಿಗೆ ಸೂಚನೆ
ಯಾದಗಿರಿ: ಸೆಪ್ಟೆಂಬರ್ ೨೫ (ಕರ್ನಾಟಕ ವಾರ್ತೆ): ನೆರೆಹಾವಳಿ ಸಂದರ್ಭದಲ್ಲಿ ಹಾನಿಗೊಳಗಾದ ಜಿಲ್ಲೆಯ ೧೬ ಶಾಲೆಗಳನ್ನು ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅವರು ಮಾತನಾಡಿದರು.
ಪ್ರವಾಹ ಸಂದರ್ಭದಲ್ಲಿ ಹಾನಿಯಾಗಿದ್ದರೂ ಆಯಾ ಇಲಾಖೆಗಳ ಲಭ್ಯವಿರುವ ಅನುದಾನದಲ್ಲಿಯೇ ದುರಸ್ತಿ ಕಾರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ನೆರೆ ಪರಿಹಾರ ನಿಧಿಯ ಅನುದಾನಕ್ಕಾಗಿ ನಿರೀಕ್ಷೆ ಇಟ್ಟುಕೊಳ್ಳಬಾರದು. ಲಭ್ಯವಿರುವ ಅನುದಾನದಲ್ಲಿ ಕಾಮಗಾರಿ ಸಾಧ್ಯವಿಲ್ಲದಿದ್ದರೆ ಮಾತ್ರ ಪ್ರಸ್ತಾವನೆ ಸಲ್ಲಿಸಬೇಕೆಂದು ಆರ್ಥಿಕ ಇಲಾಖೆಯಿಂದ ಸ್ಪಷ್ಟ ಸೂಚನೆ ಇದೆ. ಆದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಲಭ್ಯವಿರುವ ಅನುದಾನದಲ್ಲಿಯೇ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ನೆರೆ ಹಾವಳಿಯಿಂದಾಗಿ ಉಂಟಾದ ಹಾನಿ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು. ರಸ್ತೆ, ಕುಡಿಯುವ ನೀರು ಹಾಗೂ ಮೂಲಕ ಸೌಕರ್ಯ ಒದಗಿಸುವಂತೆ ಅವರು ನಿರ್ದೇಶಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ೧೩ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳಿದ್ದು, ೩ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ೫ ಪ್ರಕರಣಗಳಿಗೆ ಎಫ್‌ಎಸ್‌ಎಲ್ ವರದಿ ಬಾಕಿ ಇದ್ದು, ೫ ತಿರಸ್ಕೃತವಾಗಿವೆ ಎಂಬುದಾಗಿ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರಿಂದ ಮಾಹಿತಿ ಪಡೆದ ಕಾರ್ಯದರ್ಶಿಗಳು, ಬಾಕಿ ಇರುವ ರೈತರ ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸಬೇಕು. ಮಾಸಾಶನ, ರೈತರ ಮಕ್ಕಳ ಶಾಲಾ ದಾಖಲಾತಿ ಬಗ್ಗೆಯೂ ಗಮನಹರಿಸಬೇಕು. ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಬಿತ್ತನೆ ಬೀಜಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ರಸಗೊಬ್ಬರ ಕೂಡ ಸಂಗ್ರಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಮೃತ ರೈತರ ಹೆಸರಿನಲ್ಲಿ ಸಾಲ ಇರದ ಕಾರಣಕ್ಕೆ ಪ್ರಕರಣಗಳು ತಿರಸ್ಕೃತವಾಗಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ತಿರಸ್ಕೃತ ಆತ್ಮಹತ್ಯೆ ಪ್ರಕರಣಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಿದ್ದಾರೆ. ನೆರೆಹಾವಳಿಯಲ್ಲಿ ಬೆಳೆಹಾನಿಯಿಂದಾಗಿ ಪರ್ಯಾಯ ಬೆಳೆಗಳ ಬಿತ್ತನೆಗೆ ರೈತರು ಮುಂದಾಗಿರುವುದರಿಂದ ರಸಗೊಬ್ಬರದ ಕೊರತೆ ಉಂಟಾಗಿದೆ. ಯೂರಿಯಾ ರಸಗೊಬ್ಬರ ಪೂರೈಕೆಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೨೬.೬೧ ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದ್ದು, ೧೦.೯೯ ಮಾನವ ದಿನಗಳ ಗುರಿಯನ್ನು ಈಗಾಗಲೇ ತಲುಪುವ ಮೂಲಕ ಶೇ.೪೧.೩೨ರಷ್ಟು ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುರಪುರ ತಾಲ್ಲೂಕಿನ ತಳ್ಳಳ್ಳಿ ಬಿ ಮತ್ತು ಯಕ್ತಾಪುರ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗನೂರ, ಎಂ.ಬೊಮ್ಮನಳ್ಳಿ, ಕಾಚಾಪುರ ಹಾಗೂ ಯಕ್ತಾಪುರ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ರಾಜ್‌ಕುಮಾರ ಪತ್ತಾರ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಯಿತು. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.
ವಿವಿಧೆಡೆ ಭೇಟಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ಅವರು ಸಭೆಯ ನಂತರ ಕಲಿಕೆ ಟಾಟಾ ಟ್ರಸ್ಟ್, ಅಜೀಂ ಪ್ರೆÃಮ್‌ಜಿ ಫೌಂಡೇಶನ್ ಕೇಂದ್ರಗಳಿಗೆ ಹಾಗೂ ಜಿಲ್ಲೆಯ ಕೊಳ್ಳೂರ ಎಂ. ಬ್ರಿಡ್ಜ್ಗೆ ಭೇಟಿ ನೀಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ