ಬುಧವಾರ, ಜೂನ್ 23, 2021

 ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು 

                                                        ಡಾ. ವೈ.ಎಸ್,ಅಮರೇಶ 

ಯಾದಗಿರಿ,ಜೂ.23(ಕ.ವಾ): ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುವದರಿಂದ ರೈತರು ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕೆಂದು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ, ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ. ವೈ.ಎಸ್  ಅಮರೇಶ ಅವರು ತಿಳಿಸಿದರು.

ಸುರುಪುರ ತಾಲೂಕಿನ ಕವಡಿಮಟ್ಟಿಯಲ್ಲಿರುವ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಂತರಜಾಲದ ಮೂಲಕ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆರೋಗಗಳನ್ನು ನಿಯಂತ್ರಿಸಲು ಅನೇಕ ರಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವದು ಸರ್ವೆ ಸಾಮಾನ್ಯ, ಆದರೆ ರೈತರು ಅತಿಯಾದ ಮತ್ತು ಅಸಮರ್ಪಕವಾದ ರಸಾಯನಿಕ ರೋಗನಾಶಕಗಳನ್ನು ಬಳಸುವುದರಿಂದ ಪರಿಸರ, ಜಲ ಮತ್ತು ವಾಯು ಮಾಲಿನ್ಯ ಹೆಚ್ಚಾಗಿ ತಿನ್ನುವ ಆಹಾರವು ಸಹ ವಿಷವಾಗುವುದು, ಇದಲ್ಲದೇ ಶಿಲೀಂದ್ರಗಳಲ್ಲಿ ಶಿಲೀಂದ್ರನಾಶಕ ನಿರೋಧಕ ಶಕ್ತಿ ಕಂಡುಬರುವುದು ಇಂತಹ ದುಷ್ಟಪರಿಣಾಮದಿಂದ ಜೈವಿಕನಾಶಕಗಳ ಬಳಕೆ ಹೆಚ್ಚಾಗುತ್ತದೆ ಎಂದರು.


 

ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥರು ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅರುಣಕುಮಾರ ಹೊಸಮನಿ ಮಾತನಾಡಿ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನಗಳ ಅಳವಡಿಕೆಯು ಶತಮಾನಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. 

ಜಾಗತಿಕ ಮಟ್ಟದಲ್ಲಿ ಇಂದು ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನಲೆಯಲ್ಲಿ, ಜೈವಿಕ ವಿಧಾನಗಳನ್ನು ಕ್ರಮಬದ್ದವಾಗಿ ಅಳವಡಿಸಿ, ಕೀಟ ನಿರ್ವಹಿಸಿ ಬೆಳೆಯುವುದರಿಂದ ಉತ್ತಮ ಫಸಲನ್ನು ಪಡೆಯಬಹುದು ಮತ್ತು ರೋಗಕಾರದ ಶಿಲೀಂದ್ರಗಳಾವು ಎಂದರೆ, ಬೆವೆರಿಯಾ, ಮೆಟಾರೈಜಿಯಂ, ನೊಮುರಿಯಾ, ವರ್ಟಿಸಿಲಿಯೊ, ಹಿರ್ಸುಟಿಲ್ಲಾ ಮತ್ತು ಪೆಸಿಲೋಮೈಸಿಸ್ ಪ್ರಚಲಿತಿಯಲ್ಲಿ ಇರುವ ಜೈವಿಕ ಶಿಲೀಂದ್ರನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತರಬೇತಿಯ ಆಯೋಜಕರಾದ. ಡಾ. ಗುರುಪ್ರಸಾದ ಅವರು ನಿರೂಪಿಸಿ,ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲೆ ಸುಮಾರು 29ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...