ಬುಧವಾರ, ಏಪ್ರಿಲ್ 14, 2021

 ಅಂಬೇಡ್ಕರ್ ಆದರ್ಶ ಮತ್ತು ಗುಣಗಳನ್ನು ತಪ್ಪದೆ ಪಾಲಿಸಿ

;ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ,ಏ.14.(ಕ.ವಾ):- ಅಂಬೇಡ್ಕರ್ ಆದರ್ಶ ಮತ್ತು ಗುಣಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಂಡು, ಅಂಬೇಡ್ಕರ್ ಅವರಂತೆ ದುಡಿದು ಈ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಪ್ರತಿಪಾದಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಯೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 130 ನೆಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ವ್ಯಕ್ತಿತ್ವವು ಯಾವಾಗಲೂ ಕೆಳವರ್ಗದವರ ಧ್ವನಿಯಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಮೀಸಲಾತಿಯನ್ನು ತರುವ ಜೊತೆಗೆ ರೈತರ, ಕಾರ್ಮಿಕರ ಮಹಿಳೆಯರ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಶ್ರಮಿಸಿದ ಮಹಾನ್ ನಾಯಕರಾಗಿದ್ದರು ಎಂದು ಗುಣಗಾಣ ಮಾಡಿದರು.
ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದರು.
ಅAಬೇಡ್ಕರ್ ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಓದುವುದರಲ್ಲಿ ಅಪಾರ ಆಸಕ್ತಿ, ಚುರುಕು ತನದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅಂಬೇಡ್ಕರ್ ರವರ ಬುದ್ಧಿವಂತಿಕೆ ಮೆಚ್ಚಿಕೊಂಡು ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದ ಬ್ರಾಹ್ಮಣ ಅಧ್ಯಾಪಕರೊಬ್ಬರು ಅಂಬೇಡ್ಕರ್ ಎಂಬ ನಾಮಾಂಕಿತವನ್ನು ಉಡುಗೊರೆಯಾಗಿ ಭೀಮರಾವ್‌ಗೆ ನೀಡಿದ್ದು, ನಾವು ನೋಡಬಹುದಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರವಲ್ಲದೆ, ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ ನಿಲುವಿನಿಂದ ಭಾರತೀಯರೆಲ್ಲರ ಮನದಲ್ಲಿ ನೆಲೆಯಾಗಿದ್ದಾರೆ. ಮಹಿಳೆಯರಿಗೆ ಸಮಾನತೆ-ಸಹಬಾಳ್ವೆ ನೀಡಬೇಕು ಎನ್ನುವ ಕಾರಣಕ್ಕಾಗಿ ಮಹಿಳಾ ಪರ ಹಲವಾರು ಹೋರಾಟಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆಯ ತತ್ವವನ್ನು ಅಳವಡಿಸುವ ಮೂಲಕ ಶೋಷಿತ ವರ್ಗದವರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಿದರು ಎಂದು ಹೇಳಿದರು.
ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿ ಶೋಷಿತ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟರು. ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಯಲ್ಲಿ ಅವರ ಪಾತ್ರ ಮುಖ್ಯವಾಗಿತ್ತು ಎಂದರು.
ಸಾಧಕರಿಗೆ ಸನ್ಮಾನ:
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶ್ಯಾಂಸನ್ ಮ್ಯಾಳಿಕೇರಿ, ಭಾಗಪ್ಪ ಬೆಳ್ಳಿ, ಶಿವಪ್ಪ ಗಿರೆಪ್ನೋರ್, ರಾಮಣ್ಣ ಕಲ್ಲದೇವನಳ್ಳಿ, ಚಂದ್ರ ಚಕ್ರವರ್ತಿ, ಗುರುನಾಥ ತಲಾರಿ ಅವರಿಗೆ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೋಟ್ನಡಿಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್.ಚಂಡ್ರಿಕಿ, ನಗರಸಭೆಯ ಅಧ್ಯಕ್ಷ ವಿಲಾಸ ಬಿ.ಪಾಟೀಲ್, ನಗರಸಭೆಯ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ, ಉಪನ್ಯಾಸಕರಾದ ಬಿ.ಆರ್.ಅಂಚೆಸೂಗುರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಕರಾದ ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ, ಗುರು ಪ್ರಸಾದ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.
ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ:
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ ಜಯಂತಿ ಪ್ರಯುಕ್ತ ನಗರದ ಬಿಎಸ್‌ಎನ್‌ಎಲ್ ಕಚೇರಿಯ ಪಕ್ಕದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ, ನಗರಸಭೆಯ ಪೌರಯುಕ್ತರಾದ ಬಿ.ಟಿ.ನಾಯಕ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇತರರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...