ಗುರುವಾರ, ಏಪ್ರಿಲ್ 8, 2021


 ದೇವತ್ಕಲ್ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲಿ ಕೆಲಸ ಮಾಡಿ :ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ,ಏ.08.(ಕ.ವಾ):- ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಏಪ್ರಿಲ್ 17 ರಂದು ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಹೂಡಲಿರುವ  ಹಿನ್ನೆಲೆಯಲ್ಲಿ ದೇವತ್ಕಲ್ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ  ಅಧಿಕಾರಿಗಳು ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.


ಏಪ್ರಿಲ್ 17 ರ ರಂದು ದೇವತ್ಕಲ್ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಕೂಡಲೇ ದೇವತ್ಕಲ್ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ ಸೇರಿದಂತೆ ಇತರ ಸಮಸ್ಯೆಗಳನ್ನು ಆಲಿಸಬೇಕೆಂದು ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಚಿಸಿದರು.


ಅಂದು ದೇವತ್ಕಲ್ ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಳಿಗೆಗಳನ್ನು ಆರಂಭಿಸಿ ಸಾರ್ವಜನಿಕರಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿಬೇಕೆಂದು ಜಿಲ್ಲಾಧಿಕಾರಿ ಅವರು ಹೇಳಿದರು.


ಗ್ರಾಮ ವಾಸ್ತವ್ಯದಲ್ಲಿ ಗ್ರಾಮದ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸುವುದು. ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು ಮತ್ತು ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು.


ಆಧಾರ್ ಕಾರ್ಡ ಅನೂಕೂಲತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ತಿಳಿಹೇಳಿದರು.

 

ಕೋವಿಡ್ ಮಾರ್ಗಸೂಚಿನ್ವಯ ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಮತ್ತು ಜನರಿಗೆ ಮಾಸ್ಕ್, ಸಾನಿಟೈಜರ್ ಬಳಸುವುದು ಹಾಗೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಬೇಕು ಎಂದರು. 


ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಸುರಪುರ ತಾಲೂಕಿನ ತಹಶಿಲ್ದಾರ್ ಸುಬ್ಬಣ್ಣ ಜಮಖಂಡಿ, ವಡಗೇರಾ ತಹಶಿಲ್ದಾರ್ ಸುರೇಶ್ ಅಂಕಲಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಚನ್ನಬಸವ, ಆಹಾರ ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ  ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಇದ್ದರು.    




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...