ಗುರುವಾರ, ಏಪ್ರಿಲ್ 1, 2021

 ಕೋವಿಡ್-19 ಇನ್ನಿತರ ವಿಷಯಗಳ ಕುರಿತು  ಪ್ರಗತಿ ಪರಿಶೀಲನಾ ಸಭೆ

ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು

: ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್                                                         

ಯಾದಗಿರಿ, ಮಾ.31 (ಕ.ವಾ): ಕೋವಿಡ್ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಸೂಚಿಸಲಾಗಿರುವ ವಿವಿಧ ವರ್ಗದ ಎಲ್ಲಾ ಅರ್ಹರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ರಾಜ್ಯದ ಮುಖ್ಯಕಾರ್ಯದರ್ಶಿಗಳಾದ ಪಿ. ರವಿಕುಮಾರ್ ಅವರು ತಿಳಿಸಿದರು.



ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕೋವಿಡ್-19 ಹಾಗೂ ಇನ್ನಿತರ ವಿಷಯಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ಮೊದಲನೇ ಲಸಿಕೆ ಪಡೆದಿರುವ ಮಂಚೂಣಿ ಕಾರ್ಯಕರ್ತರಾದ ವೈದ್ಯರು, ನರ್ಸ್, ಪೊಲೀಸರು ಮುಂತಾದವರು 2ನೇ ಲಸಿಕೆಯನ್ನೂ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ. ಆರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 10,803 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸಕ್ತ ಪ್ರತಿದಿನ 1,150 ಪ್ರಕರಣಗಳ ಪರೀಕ್ಷೆ ನಡೆಸುತ್ತಿದ್ದು, ಇನ್ಮುಂದೆ 1,500 ಪ್ರಕರಣಗಳ ಪರೀಕ್ಷೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.   

ದಿನವೊಂದಕ್ಕೆ ಸರಾಸರಿ 5 ಸಾವಿರ ಕೋವಿಡ್ ಲಸಿಕೆ ಹಾಕುತ್ತಿರುವುದಕ್ಕೆ  ಮೆಚ್ಚುಗೆಯ ಮಾತನಾಡಿದ  ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಂತಹ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ. ಆರ್ ಅವರು ಮಾತನಾಡಿ, ಸುರುಪುರ ನಗರದ 31 ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇದೆ. 240 ಕೋಟಿ ರೂಪಾಯಿ ವೆಚ್ಚದಲ್ಲಿ ಶೆಳ್ಳಗಿ ಗ್ರಾಮದ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದ ಅವರು, ಕಳೆದ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಅಂತರ್ಜಲ ವೃದ್ಧಿಯಾಗಿದ್ದು, ಈ ವರ್ಷ ಅಷ್ಟೊಂದು ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು. 

ಇನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಜಿಲ್ಲೆಯಲ್ಲಿ 37 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಹಾಗೂ ಸುಭಾಷ್ ನಗರದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. 32 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಈ ಹಳ್ಳಿಗಳೂ ಸೇರಿವೆ. ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು. 

ಪಿಎಂ.ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ ನೀಡುವ ಯೋಜನೆಯಡಿ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಲ ಮಂಜೂರಾತಿ ಮಾಡಬೇಕೆಂದು ಅವರು, ಈ ಕುರಿತು ಪುರಸಭೆ, ನಗರಸಭೆ ಅಧಿಕಾರಿಗಳು ಹಾಗೂ ಬ್ಯಾಂಕರ್ಸ್ಗಳ ಸಭೆ ಕರೆದು ಸಾಲ ಮಂಜೂರು ಮಾಡಲು ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.  

ಇನ್ನು ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಒಟ್ಟು 51 ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವುದು ಬಾಕಿ ಇದ್ದು, ಶೀಘ್ರ ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದ ಅವರು, ಸಿಂಧುತ್ವ ಪ್ರಮಾಣಪತ್ರ ನೀಡುವ ಕುರಿತಂತೆ ಇರುವ ನಿಯಮಗಳನ್ನು ಸರಳೀಕರಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ರೈತರ ಜಮೀನಿನ ವಿವರಗಳನ್ನು ಫ್ರೂಟ್ಸ್ ಪೋರ್ಟಲ್‌ನಲ್ಲಿ  ಆಧಾರ್  ನೋಂದಣಿ ಮುಂತಾದವುಗಳನ್ನು ಶೀಘ್ರ ಮುಗಿಸಬೇಕು ಎಂದು ಅವರು  ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

ಪ್ರಾದೇಶಿಕ ಆಯುಕ್ತರು ಮತ್ತು ಕಲ್ಯಾಣ ಕರ್ನಾಟಕ  ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ  ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ವಿವಿಧ ಸಾಲಿನಲ್ಲಿ ಕೈಗೊಂಡು ಮುಗಿಸಿರುವ ಕಾಮಗಾರಿಗಳ ವಿವರಗಳನ್ನು ಮಂಡಳಿಯ ಸಾಫ್ಟ್ವೇರ್‌ನಲ್ಲಿ ಅಪ್‌ಡೇಟ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳು ಮಾತನಾಡಿ, ಕಾಮಗಾರಿ ನಡೆಸಿ ಮುಕ್ತಾಯ ಗೊಳಿಸಿರುವ ಅನುಷ್ಠಾನ ಏಜೆನ್ಸಿಗಳು ಕಾಮಗಾರಿ ಮುಗಿದ ತಕ್ಷಣ  ಸಾಫ್ಟ್ವೇರ್‌ನಲ್ಲಿ ಅಪ್‌ಡೇಟ್ ಮಾಡಬೇಕು ಎಂದ ಅವರು, ಇತ್ತೀಚಿನ ಸಾಲಿನ ನೂರಾರು ಕಾಮಗಾರಿಗಳನ್ನು ಇನ್ನೂ ಆರಂಭಿಸದಿರುವುದಕ್ಕೆ ವಿವಿಧ ಏಜೆನ್ಸಿಯ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವ ಮೂಲಕ ಈ ಜಿಲ್ಲೆಯ ಜನತೆ ಬೆಂಗಳೂರು ಮತ್ತಿತರೆಡೆ ಗುಳೆ ಹೋಗುವುದನ್ನು ತಪ್ಪಿಸಬೇಕು. ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಜನತೆ ಅವರವರ ಊರಿನಲ್ಲೇ ಉಳಿದರೆ ಒಳಿತು ಎಂದು ಸಲಹೆ ನೀಡಿದರು.

ಕಳೆದ ವರ್ಷ ಕೋವಿಡ್ ಸೋಂಕು ಇಡೀ ವರ್ಷ ಕಾಡಿದ್ದರಿಂದ ಅನುದಾನದ ಸಮಸ್ಯೆಯಾಗಿದ್ದು, 2021-22ನೇ ಸಾಲಿನಲ್ಲಿ ಯಾವುದೇ ಅನುದಾನದ ಕೊರತೆಯಾಗುವುದಿಲ್ಲ. 2021-22ನೇ ಸಾಲಿಗೆ ಸಂಬAಧಿಸಿದAತೆ ಎಲ್ಲಾ ಕ್ರಿಯಾ ಯೋಜನೆಗಳನ್ನು ಬೇಗ ಸಿದ್ಧಪಡಿಸಿ ಮಂಜೂರಾತಿಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ನಿರ್ದೇಶನ ನೀಡಿದರು.

  ಯಾದಗಿರಿ ಜಿಲ್ಲೆಯಾಗಿ 10 ವರ್ಷ ಪೂರೈಸಿದ್ದರೂ, ಜಿಲ್ಲೆ ಇನ್ನು ಅಭಿವೃದ್ಧಿ ಕಂಡಿಲ್ಲ. ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹೆಚ್ಚಿನವರು ಇದೇ ಜಿಲ್ಲೆಯವರಾಗಿದ್ದಾರೆ. ಸ್ವಂತ ಜಿಲ್ಲೆ ಎಂಬ ಅಭಿಮಾನದಿಂದ ಇಚ್ಛಾಶಕ್ತಿ ಪ್ರದರ್ಶಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್ ಸೋನಾವಣೆ ಮಾತನಾಡಿ, ದೋರನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಬಿಟ್ಟರೆ, ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಶಾಂತಿಯುತವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಮುಂತಾದವರು ಇದ್ದರು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...