ಸೋಮವಾರ, ಆಗಸ್ಟ್ 30, 2021

 ಜಿಲ್ಲೆಯಲ್ಲಿ ಈ  ಸಾಲಿಗೆ ಶೇ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣ  

ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರುಡಾಗುವ ಸಾಧ್ಯತೆ ಹೆಚ್ಚು

: ಜಂಟಿ ಕೃಷಿ ನಿರ್ದೇಶಕ ಅಭೀದ್ ಎಸ್.ಎಸ್

ಯಾದಗಿರಿ,ಆಗಸ್ಟ್ 30, (ಕರ್ನಾಟಕ ವಾರ್ತೆ): ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರುಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಹೀಗಾಗಿ ರೈತರು ಮಿತವಾಗಿ ರಸಗೊಬ್ಬರಗಳ ಬಳಕೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಅಭೀದ್ ಎಸ್.ಎಸ್ ಸಲಹೆ ನೀಡಿದರು.

ನಗರದ ಜಿ.ಪಂ ಸಂಕೀರ್ಣದಲ್ಲಿರುವ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

 ರೈತರು ರಸಗೊಬ್ಬರಗಳ ಬಳಕೆಯನ್ನು ಕಡಿಮೆಗೊಳಿಸಿ, ಸಾವಯುವ ಗೊಬ್ಬರಗಳ ಬಳಕೆಗೆ ಮುಂದಾಗಬೇಕು, ವಿಜ್ಞಾನಿಗಳ ಪ್ರಕಾರ ರಸಗೊಬ್ಬರ ಹೆಚ್ಚಾದ ಬಳಕೆಯಿಂದ ಭೂಮಿ ತನ್ನ ಫಲವತತ್ತೆಯನ್ನು ಕಳೆದುಕೊಳ್ಳುತ್ತದೆ ಎಂದರು. ರೈತರು ಡಿ.ಎ.ಪಿ. ಯೂರಿಯಾ ಬದಲಿಗೆ ಕಾಂಪ್ಲೇಕ್ಸ್ ನಂತಹ ಗೊಬ್ಬರವನ್ನು ಬಳಸಬೇಕು ಎಂದರು.

ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ 28ರವರಗೆ 292.0 ಮೀ.ಮೀನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ  ಸಾಲಿಗೆ ಶೇ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣ :   ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 92.74 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಅದರಲ್ಲಿ 392799 ಹೇಕ್ಟರ್ ಬಿತ್ತನೆ ಗುರಿಯಲ್ಲಿ 364282 ಹೇಕ್ಟರ್ ನಷ್ಟು ಬಿತ್ತನೆಯಾಗಿದೆ ಎಂದವರು ತಿಳಿಸಿದರು.

ಈ ಬಾರಿ ಜಿಲ್ಲೆಯ ರೈತರು ಭತ್ತ, ಸಜ್ಜೆ, ತೊಗರಿ, ಹೆಸರು, ಶೇಂಗಾ, ಹತ್ತಿ ಬೆಳೆಗಳನ್ನು ಬೆಳೆದಿದ್ದು,ಇದರಲ್ಲಿ ಹೆಚ್ಚಿನ ರೈತರು ಹತ್ತಿ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ ಎಂದು ಹೇಳಿದರು. 

ಸುರಪುರ ಭಾಗದಲ್ಲಿ ಇನ್ನು ಹೆಚ್ಚಿನ ಬಿತ್ತನೆ ಕಾರ್ಯ ನಡೆದಿದ್ದು, ಈ ವಾರದಲ್ಲಿ ಬಿತ್ತನೆ ಕಾರ್ಯದಲ್ಲಿ ಶೇ100ರಷ್ಟು ಪ್ರಗತಿ ಸಾಧಿಸುವುದಾಗಿ ಅವರು ತಿಳಿಸಿದರು.

ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಅವರು ಬೆಳೆ ಸಮೀಕ್ಷೆಯಲ್ಲಿ 419869 ಪ್ಲಾಟುಗಳಲ್ಲಿ  34158ರಷ್ಟು ಕಾರ್ಯವನ್ನು ಈಗಾಗಲೇ ಪೂರ್ಣಗೊಂಡಿದ್ದು, ಶೇ 8.14ನಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಲ್ಲೆಗೆ 3ನೇ ಸ್ಥಾನ ಲಭಿಸಿದೆ ಎಂದವರು ಮಾಹಿತಿ ನೀಡಿದರು.

ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಡಿ.ಎ.ಪಿ ಗೊಬ್ಬರ ಹೊರತುಪಡಿಸಿ ಇನ್ಯಾವುದೇ ಗೊಬ್ಬರಗಳ ಕೊರತೆ ಜಿಲ್ಲೆಗೆಯಾಗಿರುವುದಿಲ್ಲ ಎಂದರು. ಡಿಎಪಿ 24559 ಮೆ.ಟನ್ ಬೇಡಿಕೆಯಲ್ಲಿ ಜಿಲ್ಲೆಗೆ 22907 ಮೆ.ಟನ್ ಪೂರೈಕೆಯಾಗಿದ್ದು,1651.2 ಮೆ.ಟನ್ ಕೊರತೆಯಾಗಿರುತ್ತದೆ. ಯೂರಿಯಾ ಗೊಬ್ಬರವು ಶೇ.139ರಷ್ಟು ಜಿಲ್ಲೆಗೆ ಸರಬರಾಜು ಮಾಡಿದ್ದು, ಬೇಡಿಕೆಗಿಂತ ಹೆಚ್ಚಿನ ಗೊಬ್ಬರ ಪೂರೈಸಿಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ಡಾ.ಬಾಲರಾಜ, ರಾಜಕುಮಾರ್ ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...