ವಿಷಯುಕ್ತ ತ್ಯಾಜ್ಯವನ್ನು ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಿ; ಜಿಲ್ಲಾಧಿಕಾರಿ*
*ಕೈಗಾರಿಕೆ ಅಭಿವೃದ್ಧಿಯಾದ್ರೆ ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ; ಜಿಲ್ಲಾಧಿಕಾರಿ*
ಯಾದಗಿರಿ : ಆಗಸ್ಟ್, 04 ( ಕರ್ನಾಟಕ ವಾರ್ತಾ);
ಕಡೆಚೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ .ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ವಿಷಯುಕ್ತ ತ್ಯಾಜ್ಯವನ್ನು ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದರು.
ಮಾಲಿನ್ಯಕಾರಕ ತ್ಯಾಜ್ಯವನ್ನು ಕಾರ್ಖಾನೆಗಳ ಬೇಜವಾಬ್ದಾರಿಯಿಂದ ಕೈಗಾರಿಕಾ ಪ್ರದೇಶದ ಸುತ್ತಲಿನ ಜನತೆ ತೀವ್ರ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಕೈಗಾರಿಕಾ ಪ್ರದೇಶದಿಂದ ಹಳ್ಳ - ಕೊಳ್ಳಗಳಿಗೆ ಹರಿದ ಕಲುಷಿತ ರಾಸಾಯನಿಕ ದ್ರವದಿಂದ ಜಲಚರ, ಪಶು-ಪಕ್ಷಿಗಳು ಸೇವಿಸಿ ನಾಶವಾಗುತ್ತಿವೆ. ಹಾಗಾಗಿ ಮಾಲಿನ್ಯ ಎಸಗುತ್ತಿರುವ ಟೈರ್ ಘಟಕ ವಿರುದ್ಧ ಕೂಡಲೇ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಘಟಕವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ನಿವೇಶನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ 173 ಅರ್ಜಿಗಳು ಬಂದಿವೆ. ಮೀಸಲಾತಿಗೆ ಅನ್ವಯ ಶೇಕಡಾ 22.5 ರಷ್ಟು ಕಲ್ಪಿಸಬೇಕಾಗಿದೆ. ಸುಮಾರು 700 ಎಕರೆ ಭೂಮಿ ಹಂಚಿಕೆಗೆ ಲಭ್ಯವಿದೆ. ಅದರಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ 161 ಎಕರೆ ಹಂಚುವ ಮೀಸಲಾತಿ ಇದೆ. ಇಲ್ಲಿಯವರೆಗೆ 11 ಎಕರೆ ಹಂಚಿಕೆ ಮಾಡಲಾಗಿದೆ. ಇನ್ನೂ ನಮಗೆ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಹಂಚಿ ಮಾಡಬೇಕಾಗಿದೆ ಎಂದು ಕೈಗಾರಿಕಾ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನೂ ಒಂದು ವಾರದೊಳಗೆ ಬಂದಿರುವ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು.
*ಕೈಗಾರಿಕಾ ಅಭಿವೃದ್ಧಿಯಾದರೆ ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ. ಕೈಗಾರಿಕಾ ಪ್ರದೇಶದ ನಿವೇಶನ ಸೌಲಭ್ಯವು ಅರ್ಹರಿಗೆ ಉಪಯೋಗವಾಗಬೇಕು. ನಿವೇಶನ ಪಡೆದ ನಂತರ ಕೈಗಾರಿಕೆಗಳು ಸಮರ್ಪಕವಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು*
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಮ್ಯಾಗೇರಿ, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ, ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ