ದ್ವೀಪ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಭೇಟಿ
ನೀಲಕಂಠರಾಯನಗಡ್ಡಿಗೆ ಸಕಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವ ಭರವಸೆ
ಯಾದಗಿರಿ: ಸೆಪ್ಟಂಬರ್ 11, (ಕರ್ನಾಟಕ ವಾರ್ತೆ): ಸುರಪುರ ತಾಲೂಕಿನ ದ್ವೀಪ ಗ್ರಾಮ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಅವರು, ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಸುಮಾರು ಮೂರು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ನೀರಿನ ಮಟ್ಟ ಕಡಿಮೆ ಪ್ರಮಾಣದಲ್ಲಿರುವ ಹೊಳೆಯಲ್ಲಿ ನಡೆದು ಜಿಲ್ಲಾಧಿಕಾರಿಗಳು, ಗ್ರಾಮಸ್ಥರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಕ್ಕೆ ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ 74 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದೇ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಗ್ರಾಮಕ್ಕೆ ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಹೆಚ್ಚುವರಿ ಶಿಕ್ಷಕರ ನೇಮಕ, ರಸ್ತೆ ಸಂಪರ್ಕ, ಗ್ರಾಮದಲ್ಲಿ ಸಿಸಿ ರಸ್ತೆ ಮುಂತಾದ ಸೌಲಭ್ಯ ಕಲ್ಪಿಸುವುದಾಗಿ ಅವರು ಹೇಳಿದರು.
ಬಾಕಿ ಇರುವ ನಾಲ್ಕೈದು ವಿದ್ಯುತ್ ಕಂಬಗಳನ್ನು ನೆಟ್ಟು ಗ್ರಾಮಕ್ಕೆ ವಿದ್ಯುತ್ ಸೌಕರ್ಯ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.
ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ನೀಲಕಂಠರಾಯನಗಡ್ಡಿ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದೆಂದು ಅವರು ಘೋಷಿಸಿದರು.
ಇದೇ ಸಂದರ್ಭದಲ್ಲಿ, ತಮ್ಮ-ತಮ್ಮ ಜಮೀನುಗಳ ಖಾತೆ ಸಮಸ್ಯೆ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೂರ್ವಿಕರ(ಪಿತ್ರಾರ್ಜಿತ) ಹೆಸರಿನಲ್ಲಿರುವ ಜಮೀನುಗಳನ್ನು ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿ ಕೊಡಲಾಗುವುದು. ಈ ಮೂಲಕ ಗ್ರಾಮದ ಜನತೆಗೆ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ವಿವಿಧ ಸವಲತ್ತು ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಅವರು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಹಾಗೂ ಹಾಲನ್ನು ಸರಿಯಾಗಿ ನೀಡಲಾಗುತ್ತಿದಿಯೇ ಎಂಬ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸುರಪೂರ ತಹಸೀಲ್ದಾರ್ ಶ್ರೀ ಸುರೇಶ್ ಅಂಕಲಗಿ ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ