ಕಡೇಚೂರು-ಬಾಡಿಯಾಳ ರೈಲ್ವೇ ಬೋಗಿ ಕಾರ್ಖಾನೆ ಲೋಕಾರ್ಪಣೆ
ಕೇಂದ್ರ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅವರಿಂದ ಉದ್ಘಾಟನೆ
ಯಾದಗಿರಿ: ಆಗಸ್ಟ್ 18, (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಾರ್ಷಿಕ 600 ಬೋಗಿ ಫ್ರೇಮ್ ಉತ್ಪಾದನಾ ಸಾಮರ್ಥ್ಯದ ರೈಲ್ವೇ ಕಾರ್ಖಾನೆಯನ್ನು ಇಂದು ಕೇಂದ್ರ ರೈಲ್ವೇ ಸಚಿವರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ಅವರು ರಿಮೋಟ್ ಲಿಂಕ್ ಮೂಲಕ ನವದೆಹಲಿಯ ರೈಲ್ವೇ ಮಂಡಳಿಯಲ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ವಾಡಿ ಬೈಪಾಸ್ ಮಾರ್ಗದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈಲ್ವೇ ಯೋಜನೆಗಳು ತುರ್ತುಗತಿಯಲ್ಲಿ ಸಾಗಿದ್ದು, ಈ ಬಾರಿ 3177 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಬೃಹತ್ ಯೋಜನೆಯನ್ನು ಯಾದಗಿರಿಯ ಜನರು ಎಂದು ಮರೆಯಲ್ಲ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಯಾದಗಿರಿ ತಾಲೂಕಿನ ಕಡೇಚೂರು-ಬಾಡಿಯಾಳ ರೈಲ್ವೇ ಬೋಗಿ ಫ್ರೇಮ್ ಉತ್ಪಾದನಾ ಕಾರ್ಖಾನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯರಾದ ಶ್ರೀ ಬಿ.ವ್ಹಿ.ನಾಯಕ್ ಅವರು ಮಾತನಾಡಿ, ರಾಜ್ಯದಲ್ಲಿ ರೈಲ್ವೇ ಯೋಜನೆಗಳನ್ನು ಬಲಪಡಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಬೋಗಿ ಉತ್ಪಾದನಾ ಕೈಗಾರಿಕೆಗಾಗಿ 150 ಎಕರೆ ಜಮೀನು ಉಚಿತವಾಗಿ ನೀಡಿದ್ದು, ರಾಜ್ಯ ಸರ್ಕಾರದ ಸಹಕಾರವೂ ಇದೆ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಈ ಹಿಂದೆ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಎನ್‍ಡಿಎ ಸರ್ಕಾರ ಅದನ್ನು ಚಾಲನೆ ನೀಡಿದ್ದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ಮಾತನಾಡಿ, ಕಾರ್ಖಾನೆಗೆ ಜಮೀನು ಕಳೆದುಕೊಂಡ ರೈತರ ಮಕ್ಕಳು, ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ವೇದಿಕೆ ಮೂಲಕ ರೈಲ್ವೇ ಮಂಡಳಿಯನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯತಿ ಸದಸ್ಯೆ ಶ್ರೀಮತಿ ಶಶಿಕಲಾ ಕ್ಯಾತನಾಳ, ತಾಲೂಕು ಪಂಚಾಯತಿ ಅಧ್ಯಕ್ಷರಾದ ಶ್ರೀ ಬಾಷು ಎಸ್.ರಾಡೋಡ, ಕಡೇಚೂರ ಗ್ರಾಮ ಪಂಚಾಯತಿ ಅಧ್ಯಕ್ಷ ಭೀರಪ್ಪ, ಬಾಡಿಯಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಗೌರಮ್ಮ, ದಕ್ಷಿಣ ಮಧ್ಯೆ ರೈಲ್ವೇಯ ಮುಖ್ಯ ಮೆಕಾನಿಕಲ್ ಇಂಜಿನಿಯರ್ ಅರ್ಜುನ್ ಮುಂಡಿಯಾ, ನವದೆಹಲಿ ರೈಲ್ವೇ ಮಂಡಳಿಯ ಮೆಕಾನಿಕಲ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ.ಘೋಷರಾಯ್ ಅವರು ವೇದಿಕೆಯಲ್ಲಿದ್ದರು.
ದಕ್ಷಿಣ ಮಧ್ಯೆ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಜಾನ್ ಥಾಮಸ್ ಅವರು ಸ್ವಾಗತಿಸಿದರು. ಗುಂತಕಲ್ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ವಿಜಯ ಪಿ.ಸಿಂಗ್ ಅವರು ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ