ಗುರುವಾರ, ನವೆಂಬರ್ 2, 2017

62ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ
ಸಾಮಾಜಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ಕನ್ನಡ ಭಾಷೆಯಿಂದ ಅದ್ಭುತ ಕೊಡುಗೆ 
-: ಸಚಿವ ಶ್ರೀ ಪ್ರಿಯಾಂಕ್ ಎಂ. ಖರ್ಗೆ
ಯಾದಗಿರಿ: ನವೆಂಬರ್ 1, (ಕರ್ನಾಟಕ ವಾರ್ತೆ): ಕನ್ನಡ ಭಾಷೆಗೆ ಸಾವಿರಾರು ವರ್ಷದ ಪ್ರಾಚೀನತೆ ಇದ್ದು, ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ಅದ್ಭುತ ಕೊಡುಗೆ ನೀಡಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಎಂ. ಖರ್ಗೆ ಅವರು ಗುಣಗಾನ ಮಾಡಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ 62ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಭಾಷೆಗಳಲ್ಲಿ ಕನ್ನಡ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ದೇಶದಲ್ಲೇ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಎಂಬ ಹಿರಿಮೆ ಕನ್ನಡದ್ದು ಎಂದು ಅವರು ಹೇಳಿದರು. 
ಕುವೆಂಪು ಅವರ ಕವಿವಾಣಿಯಂತೆ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇದು ನಮ್ಮ ಪರಂಪರೆಯ ದ್ಯೋತಕವಾಗಿದೆ. ಆದರೆ, ಕೆಲ ಪಟ್ಟಭದ್ರಾ ಶಕ್ತಿಗಳು ಭಾಷೆ-ಭಾಷೆ ನಡುವೆ ಒಡಕು ಮೂಡಿಸಲು ಪ್ರಯತ್ನ ನಡೆಸಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಕನ್ನಡ ನಾಡು ವೈವಿಧ್ಯತೆಯಿಂದ ಕೂಡಿದ ನಾಡಾಗಿದ್ದು, ರನ್ನ, ಪೊನ್ನ, ಜನ್ನ, ನಾಗವರ್ಮ, ಬಸವಣ್ಣ, ಅಕ್ಕಮಹಾದೇವಿ, ಕುಮಾರವ್ಯಾಸ, ಪುರಂದರದಾಸ, ಕನಕದಾಸ ಇಂತಹ ಮಹಾನುಭಾವರು ಮತ್ತು ಶ್ರೇಷ್ಠ ಕವಿಗಳಿಗೆ ಜನ್ಮ ಕೊಟ್ಟ ನಾಡು ಎಂದು ಅವರು ಗುಣಗಾನ ಮಾಡಿದರು. ರಾಜ್ಯ ಸಂಗೀತ, ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಹೆಸರು ವಾಸಿಯಾಗಿದ್ದು, ಕನ್ನಡ ಸಾಹಿತ್ಯದ ಶೈಲಿ ಭಾರತ ಮತ್ತೆಲ್ಲೂ ಕಾಣಲಾಗದು ಎಂದು ಅವರು ಹೇಳಿದರು.
ರಾಜ್ಯ ಧಾರ್ಮಿಕ, ಸಾಂಸ್ಕøತಿಕ ಜೊತೆಗೆ ಪ್ರಾಕೃತಿಕವಾಗಿಯೂ ಶ್ರೀಮಂತವಾಗಿದೆ ಎಂದು ಹೇಳಿದ ಅವರು, ರಾಜ್ಯದ ಭೌಗೋಳಿಕ ಲP್ಪ್ಷಣಗಳನ್ನು ನೋ
ಡಿದರೆ, ಕರ್ನಾಟಕ “ಒಂದು ರಾಜ್ಯ, ಹಲವು ಜಗತ್ತು” ಸೃಷ್ಠಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇವಲ ಒಂದು ಭೂ ಪ್ರದೇಶಕ್ಕೆ ಮಾತ್ರ ಕರ್ನಾಟಕ ಸೀಮಿತವಾಗದೆ ನಾಡಿನ ಸಂಸ್ಕøತಿ, ಜನ ಸಮುದಾಯ, ಜೀವನ ಪದ್ಧತಿ ಎಂಬ ವಿಶಾಲ ಅರ್ಥವನ್ನು ಹೊಂದಿ ಭವ್ಯ ಸಂಸ್ಕøತಿಯ ನಾಡಾಗಿದೆ ಎಂದು ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸುವ ದೃಷ್ಟಿಯಿಂದ ಸರಕಾರವು ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆದೇಶ ಹೊರಡಿಸಿದೆ. ಕನ್ನಡ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದು, ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಲು ಕ್ರಮಕೈಗೊಂಡಿದೆ ಎಂದು ಅವರು ಹೇಳಿದರು. 
ರಾಜ್ಯದಲ್ಲಿ 200 ಕೆರೆಗಳ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗಿದೆ. ಹಾಗೆಯೇ ಯಾದಗಿರಿ ಜಿಲ್ಲೆಯಲ್ಲಿ 440 ಕೋಟಿ ರೂ.ವೆಚ್ಚದಲ್ಲಿ 35 ಕೆರೆಗಳ ಅಭಿವೃದ್ಧಿ ಪಡಿಸಲು ಇತ್ತೀಚೆಗೆ ಸಚಿವ ಸಂಪುಟ ಅಂಗೀಕಾರ ನೀಡಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಘೋಷಿಸಿದರು. 
ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಯಾದಗಿರಿ-ಕಲಬುರಗಿ-ಬೀದರ ಸೇರಿ ಡೆಕ್ಕನ್ ಸಕ್ರ್ಯೂಟ್ ಹೆರಿಟೇಜ್ ರಚಿಸಿದ್ದು, ಈಗಾಗಲೇ 50 ಕೋಟಿ ರೂ. ಮೀಸಲಿಡಲಾಗಿದೆ. ವಿಶೇಷವಾಗಿ ಶಹಾಪುರದ ಮಲಗಿರುವ ಬುದ್ಧ, ಯಾದಗಿರಿ ಐತಿಹಾಸಿಕ ಕೋಟೆ, ಪಕ್ಷಿಧಾಮ ಮುಂತಾದವುಗಳಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ. ಎರಡು ತಿಂಗಳಲ್ಲಿ ಟೆಂಡರ್ ಕರೆದು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. 
ಕರ್ನಾಟಕವನ್ನು  ಸದೃಢಗೊಳಿಸಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳು ಹಾಗೂ ನೀತಿಗಳ ಮೂಲಕ ರಾಜ್ಯದ ಜನತೆಯನ್ನು ಸಬಲೀಕರಿಸುತ್ತಿದೇವೆ. ರಾಜ್ಯ, ದೇಶವಲ್ಲದೆ,  ವಿಶ್ವಮಟ್ಟದಲ್ಲಿ ನಮ್ಮ ರಾಜ್ಯ ಆರ್ಥಿಕವಾಗಿ ಮುಂದಿರಬೇಕೆಂದು ನಮ್ಮ ಸರ್ಕಾರದ ಆಶಯ ಎಂದು ಅವರು ನುಡಿದರು.
ರಾಜ್ಯದಲ್ಲಿ ಅತಂತ್ಯ ಹಿಂದುಳಿದ ಕಡುಬಡವರಿಗೆ ಅನುಕೂಲವಾಗಲೆಂದು ಸರಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸಂಕಲ್ಪ ಹೊಂದಲಾಗಿದೆ ಎಂದರು. ರೈತರ ಹಿತದೃಷ್ಟಿಯಿಂದ ಸಹಕಾರಿ ಸಂಘದಿಂದ ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ವಿತರಿಸಲಾಗುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ವಿವಿಧ ಸಾಲಕ್ಕಾಗಿ 3.65 ಕೋಟಿ ರೂ.ಅನುದಾನ ನೀಡಿ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 65 ಲಕ್ಷ ಮಕ್ಕಳಿಗೆ ಬಿಸಿಯೂಟ ಯೋಜನೆ ಲಾಭ ಹಾಗೂ 63 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಪಶುಭಾಗ್ಯ ಯೋಜನೆಯಲ್ಲಿ 1.2 ಲಕ್ಷ ರೂ.ಅನುದಾನ ನೀಡಿ ಹೈನುಗಾರಿಕೆ ಸಾಲಕ್ಕೆ ಪ್ರೋತ್ಸಾಹ ನೀಡಿದ್ದು 9 ಲಕ್ಷ ಜನರು ಪಶುಭಾಗ್ಯ ಯೋಜನೆ ಲಾಭ ಪಡೆದಿದ್ದಾರೆ ಎಂದು ವಿವರಿಸಿದರು. 
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸುಭಾಶ್ಚಂದ್ರ ಕೌಲಗಿ ಅವರು ಉಪನ್ಯಾಸ ನೀಡಿ,  ಕನಕದಾಸರು, ಪುರಂದರದಾಸರು ಮುಂತಾದವರು ನಾಡು, ನುಡಿ, ಜನರ ಏಕತೆಗಾಗಿ ಸಾಹಿತ್ಯದ ಮೂಲಕ ಶ್ರಮವಹಿಸಿದ್ದಾರೆ. ಇವರ ಸಚಿದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇವಲ ನವೆಂಬರ್ ಕನ್ನಡಿಗರಾಗದೇ, ನಿತ್ಯ ಕನ್ನಡಿಗರಾಗಬೇಕೆಂದು ಅವರು ಕರೆ ನೀಡಿದರು.
ಇದೇ ವೇಳೆ ವಿವಿಧ ರಂಗದಲ್ಲಿ ಸೇವೆಗೈದ ಪತ್ರಕರ್ತರಾದ ಬಸವರಾಜ ಅಂಗಡಿ ಕೊಡೇಕಲ್, ರಾಜೇಶ ಪಾಟೀಲ ಯಡ್ಡಳ್ಳಿ, ಅಮೀನ್.ಆರ್.ಹೊಸೂರ, ದುರ್ಗೇಶ ಮಂಗಿಹಾಳ, ಕುಮಾರಸ್ವಾಮಿ ಕಲಾಲ್ ಹಾಗೂ ನಿಂಗನಗೌಡ ದೇಸಾಯಿ(ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರ), ಡಾ:ಬಸವರಾಜ ಎಸ್.ಕಲೆಗಾರ(ಚಿತ್ರಕಲೆ), ಡಾ:ಭೀಮರಾಯ ಲಿಂಗೇರಿ (ಸಾಹಿತ್ಯ) ಹಾಗೂ ಚಂದ್ರಶೇಖರ ಗೋಗಿ ಲಿಂಗೇರಿ(ಸಂಗೀತ) ಇವರನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 
ನಂತರ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು.   
ವಿವಿಧ ಇಲಾಖೆಗಳಿಂದ ತಯಾರಿಸಲಾದ ಸ್ತಬ್ಧ ಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು. ಗದಗ ಜಿಲ್ಲೆಯ ಕಾವೇರಮ್ಮ ತಂಡದ ಮಹಿಳಾ ಡೊಳ್ಳಿನ ಕಲಾ ತಂಡ, ಗದಗದ ರಾಜಶೇಖರ ಹಿರೇಮಠ ಕಲಾ ತಂಡದ ಜಗ್ಗಲಿಗೆ, ಬೀದರ ಶೋಭಾ ಓಂಕಾರ ತಂಡದ ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲೆಗಳ ಪ್ರರ್ದಶಿಸಲಾಯಿತು. 
ಗಡಿ ಪ್ರದೇಶಾಭಿವೃದ್ಧ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗುರುಮಠಕಲ್ ಶಾಸಕರಾದ ಶ್ರೀ ಬಾಬುರಾವ ಚಿಂಚನಸೂರು, ಜಿಲ್ಲಾ ಪಂಚಾಯತನ ಅಧ್ಯಕ್ಷರಾದ ಶ್ರೀ ಬಸರೆಡ್ಡಿಗೌಡ ಮಾಲಿಪಾಟೀಲ್ ಅನಪೂರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಶರಣಗೌಡ ಹೊಸಮನಿ, ನಗರಸಭೆಯ ಅಧ್ಯಕ್ಷರಾದ ಕು|| ಲಲಿತಾ ಮೌಲಾಲಿ ಅನಪೂರ, ತಾಲೂಕ ಪಂಚಾಯತ ಅಧ್ಯಕ್ಷರಾದ ಶ್ರೀ ಭಾಷು ಎಸ್. ರಾಠೋಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಪ್ಪ ಹೊಟ್ಟಿ, ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ ಜೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ|| ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ವೇದಿಕೆಯಲ್ಲಿದ್ದರು. 
ಡಾ|| ಜ್ಯೋತಿಲತಾ ತಡಿಬಿಡಿ ಮಠ ಅವರು ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ದತ್ತಪ್ಪ ಸಾಗನೂರು ವಂದಿಸಿದರು.

ಶನಿವಾರ, ಸೆಪ್ಟೆಂಬರ್ 23, 2017

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ
ಹೊಸ ತಾಲೂಕು ರಚನೆ: ಅ.3 ರೊಳಗೆ ವಿವರ ಸಲ್ಲಿಸಲು ಸೂಚನೆ
ಯಾದಗಿರಿ: ಸೆಪ್ಟೆಂಬರ್ 18, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹೊಸದಾಗಿ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲೂಕು ಕೇಂದ್ರಗಳನ್ನು ರಚಿಸುವ ಕುರಿತು ಅಗತ್ಯ ಕಚೇರಿ, ಸಿಬ್ಬಂದಿಗಳನ್ನೊಳಗೊಂಡ ಮಾಹಿತಿಯನ್ನು ಅಕ್ಟೋಬರ್ 3ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ ಜೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೊಸ ತಾಲೂಕು ರಚನೆಗೆ ಕಚೇರಿ ಕಟ್ಟಡ, ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕು ರಚನೆಯಲ್ಲಿ ಸರ್ಕಾರ ಸೂಚಿಸಿರುವ ಮಾನದಂಡಗಳನ್ನು ಅನುಸರಿಸಿ ಅಗತ್ಯವಿರುವ ಕಚೇರಿಗಳನ್ನು ಆರಂಭ ಮಾಡುವ ಕುರಿತು ಚರ್ಚಿಸಲಾಯಿತು.
ನೂತನ ತಾಲೂಕು ಕೇಂದ್ರಗಳಿಲ್ಲಿ ಅಗತ್ಯವಿರುವ ಕಚೇರಿಗಳನ್ನು ಪ್ರಾರಂಭಿಸಲು ವಿವಿಧ ಇಲಾಖೆಗಳಿಗೆ ಬೇಕಿರುವ ಕಟ್ಟಡಗಳನ್ನು ಬಾಡಿಗೆ ಅಥವಾ ಸ್ವಂತ ಕಟ್ಟಡದಲ್ಲಿ ಜನವರಿಯಲ್ಲಿ ಪ್ರಾರಂಭಿಸಬೇಕಿದೆ ಎಂದು ಅವರು ಹೇಳಿದರು.
ಪ್ರಮುಖವಾಗಿ ತಾಲೂಕು ಪಂಚಾಯತಿ ಕಾರ್ಯಾಲಯ, ತಹಸೀಲ್ದಾರರು, ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ, ಅರಣ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಕಚೇರಿಗಳಿಗೆ ಕಟ್ಟಡಗಳನ್ನು ಪಡೆಯಲು ಅವರು ಸೂಚಿಸಿದರು. ಬಾಡಿಗೆಗೆ ಪಡೆಯುವ ಕಟ್ಟಡಗಳು ಶೌಚಾಲಯದಂತ ಮೂಲ ಸೌಕರ್ಯಗಳನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಈಗಾಗಲೇ ಗುರುಮಠಕಲ್‍ನಲ್ಲಿ ಪಶು, ಗ್ರಂಥಾಲಯ, ರೇಷ್ಮೆ ಹಾಗೂ ಆರೋಗ್ಯ ಇಲಾಖೆಯ ಸ್ವಂತ ಕಟ್ಟಡಗಳಿದ್ದು, ತಾಲೂಕು ಕಚೇರಿಗಳನ್ನು ಪ್ರಾರಂಭಿಸಲು ಅಗತ್ಯ ತಯಾರಿ ಕೈಗೊಳ್ಳಲು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಾರ್ಯಾರಂಭ ಮಾಡಿರುವ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಡಗೇರಾ ಮತ್ತು ಹುಣಸಗಿಯಲ್ಲಿ ಕಟ್ಟಡಗಳನ್ನು ಪಡೆಯುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಯಾದಗಿರಿ, ಸುರಪೂರ ಹಾಗೂ ಶಹಾಪೂರ ತಾಲೂಕಿನಲ್ಲಿ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಜಮೀನುಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ಕೆ.ನಾಯಕ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಸಂತರಾವ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 3 ತಾಲೂಕಿನ ತಹಸೀಲ್ದಾರರು, ವಿಶೇಷ ತಹಸೀಲ್ದಾರರು ಸಭೆಯಲ್ಲಿ ಹಾಜರಿದ್ದರು.

ಮಂಗಳವಾರ, ಸೆಪ್ಟೆಂಬರ್ 12, 2017

 ದ್ವೀಪ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಭೇಟಿ
ನೀಲಕಂಠರಾಯನಗಡ್ಡಿಗೆ ಸಕಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವ ಭರವಸೆ
ಯಾದಗಿರಿ: ಸೆಪ್ಟಂಬರ್ 11, (ಕರ್ನಾಟಕ ವಾರ್ತೆ): ಸುರಪುರ ತಾಲೂಕಿನ ದ್ವೀಪ ಗ್ರಾಮ ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಅವರು, ಗ್ರಾಮಕ್ಕೆ ಅಗತ್ಯ  ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. 
ಸುಮಾರು ಮೂರು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ನೀರಿನ ಮಟ್ಟ ಕಡಿಮೆ ಪ್ರಮಾಣದಲ್ಲಿರುವ ಹೊಳೆಯಲ್ಲಿ ನಡೆದು ಜಿಲ್ಲಾಧಿಕಾರಿಗಳು, ಗ್ರಾಮಸ್ಥರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದರು.  ಗ್ರಾಮಕ್ಕೆ ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ 74 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದೇ ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಗ್ರಾಮಕ್ಕೆ ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಹೆಚ್ಚುವರಿ ಶಿಕ್ಷಕರ ನೇಮಕ, ರಸ್ತೆ ಸಂಪರ್ಕ, ಗ್ರಾಮದಲ್ಲಿ ಸಿಸಿ ರಸ್ತೆ ಮುಂತಾದ ಸೌಲಭ್ಯ ಕಲ್ಪಿಸುವುದಾಗಿ ಅವರು ಹೇಳಿದರು.  
ಬಾಕಿ ಇರುವ ನಾಲ್ಕೈದು ವಿದ್ಯುತ್ ಕಂಬಗಳನ್ನು ನೆಟ್ಟು ಗ್ರಾಮಕ್ಕೆ ವಿದ್ಯುತ್ ಸೌಕರ್ಯ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.
ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ನೀಲಕಂಠರಾಯನಗಡ್ಡಿ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದೆಂದು ಅವರು ಘೋಷಿಸಿದರು. 
ಇದೇ ಸಂದರ್ಭದಲ್ಲಿ, ತಮ್ಮ-ತಮ್ಮ ಜಮೀನುಗಳ ಖಾತೆ ಸಮಸ್ಯೆ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೂರ್ವಿಕರ(ಪಿತ್ರಾರ್ಜಿತ) ಹೆಸರಿನಲ್ಲಿರುವ ಜಮೀನುಗಳನ್ನು ತಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿ ಕೊಡಲಾಗುವುದು. ಈ ಮೂಲಕ ಗ್ರಾಮದ ಜನತೆಗೆ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ವಿವಿಧ ಸವಲತ್ತು ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ಜೆ. ಮಂಜುನಾಥ್ ಅವರು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಹಾಗೂ ಹಾಲನ್ನು ಸರಿಯಾಗಿ ನೀಡಲಾಗುತ್ತಿದಿಯೇ ಎಂಬ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸುರಪೂರ ತಹಸೀಲ್ದಾರ್ ಶ್ರೀ ಸುರೇಶ್ ಅಂಕಲಗಿ ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

ಶುಕ್ರವಾರ, ಆಗಸ್ಟ್ 18, 2017

ಕಡೇಚೂರು-ಬಾಡಿಯಾಳ ರೈಲ್ವೇ ಬೋಗಿ ಕಾರ್ಖಾನೆ ಲೋಕಾರ್ಪಣೆ
ಕೇಂದ್ರ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅವರಿಂದ ಉದ್ಘಾಟನೆ
ಯಾದಗಿರಿ: ಆಗಸ್ಟ್ 18, (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಾರ್ಷಿಕ 600 ಬೋಗಿ ಫ್ರೇಮ್ ಉತ್ಪಾದನಾ ಸಾಮರ್ಥ್ಯದ ರೈಲ್ವೇ ಕಾರ್ಖಾನೆಯನ್ನು ಇಂದು ಕೇಂದ್ರ ರೈಲ್ವೇ ಸಚಿವರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ಅವರು ರಿಮೋಟ್ ಲಿಂಕ್ ಮೂಲಕ ನವದೆಹಲಿಯ ರೈಲ್ವೇ ಮಂಡಳಿಯಲ್ಲಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ವಾಡಿ ಬೈಪಾಸ್ ಮಾರ್ಗದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈಲ್ವೇ ಯೋಜನೆಗಳು ತುರ್ತುಗತಿಯಲ್ಲಿ ಸಾಗಿದ್ದು, ಈ ಬಾರಿ 3177 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಬೃಹತ್ ಯೋಜನೆಯನ್ನು ಯಾದಗಿರಿಯ ಜನರು ಎಂದು ಮರೆಯಲ್ಲ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಯಾದಗಿರಿ ತಾಲೂಕಿನ ಕಡೇಚೂರು-ಬಾಡಿಯಾಳ ರೈಲ್ವೇ ಬೋಗಿ ಫ್ರೇಮ್ ಉತ್ಪಾದನಾ ಕಾರ್ಖಾನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯರಾದ ಶ್ರೀ ಬಿ.ವ್ಹಿ.ನಾಯಕ್ ಅವರು ಮಾತನಾಡಿ, ರಾಜ್ಯದಲ್ಲಿ ರೈಲ್ವೇ ಯೋಜನೆಗಳನ್ನು ಬಲಪಡಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಬೋಗಿ ಉತ್ಪಾದನಾ ಕೈಗಾರಿಕೆಗಾಗಿ 150 ಎಕರೆ ಜಮೀನು ಉಚಿತವಾಗಿ ನೀಡಿದ್ದು, ರಾಜ್ಯ ಸರ್ಕಾರದ ಸಹಕಾರವೂ ಇದೆ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಈ ಹಿಂದೆ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಎನ್‍ಡಿಎ ಸರ್ಕಾರ ಅದನ್ನು ಚಾಲನೆ ನೀಡಿದ್ದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ಮಾತನಾಡಿ, ಕಾರ್ಖಾನೆಗೆ ಜಮೀನು ಕಳೆದುಕೊಂಡ ರೈತರ ಮಕ್ಕಳು, ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ವೇದಿಕೆ ಮೂಲಕ ರೈಲ್ವೇ ಮಂಡಳಿಯನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯತಿ ಸದಸ್ಯೆ ಶ್ರೀಮತಿ ಶಶಿಕಲಾ ಕ್ಯಾತನಾಳ, ತಾಲೂಕು ಪಂಚಾಯತಿ ಅಧ್ಯಕ್ಷರಾದ ಶ್ರೀ ಬಾಷು ಎಸ್.ರಾಡೋಡ, ಕಡೇಚೂರ ಗ್ರಾಮ ಪಂಚಾಯತಿ ಅಧ್ಯಕ್ಷ ಭೀರಪ್ಪ, ಬಾಡಿಯಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಗೌರಮ್ಮ, ದಕ್ಷಿಣ ಮಧ್ಯೆ ರೈಲ್ವೇಯ ಮುಖ್ಯ ಮೆಕಾನಿಕಲ್ ಇಂಜಿನಿಯರ್ ಅರ್ಜುನ್ ಮುಂಡಿಯಾ, ನವದೆಹಲಿ ರೈಲ್ವೇ ಮಂಡಳಿಯ ಮೆಕಾನಿಕಲ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ.ಘೋಷರಾಯ್ ಅವರು ವೇದಿಕೆಯಲ್ಲಿದ್ದರು.
ದಕ್ಷಿಣ ಮಧ್ಯೆ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಜಾನ್ ಥಾಮಸ್ ಅವರು ಸ್ವಾಗತಿಸಿದರು. ಗುಂತಕಲ್ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ವಿಜಯ ಪಿ.ಸಿಂಗ್ ಅವರು ವಂದಿಸಿದರು.

ಶುಕ್ರವಾರ, ಮಾರ್ಚ್ 3, 2017

ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಪಾಲಿಸಿ
-:ಗೌರವಾನ್ವಿತ ಶ್ರೀ ಸದಾನಂದ ಎನ್. ನಾಯಕ್
ಯಾದಗಿರಿ, ಮಾರ್ಚ್, 02 (ಕರ್ನಾಟಕ ವಾರ್ತೆ): ಭಾರತ ಸಂವಿಧಾನದ ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಪಾಲಿಸಿದರೆ ನಿಮ್ಮಗಷ್ಟೇ ಅಲ್ಲ, ಸಮಾಜಕ್ಕೂ ಒಳಿತಾಗಲಿದೆ ಎಂದು ಜಿಲ್ಲಾ ಸೆಷೆನ್ಸ್  ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸದಾನಂದ ಎನ್. ನಾಯಕ್ ಅವರು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಜಿಲ್ಲಾ ವಕೀಲರ ಸಂಘÀ ಹಾಗೂ ಸರಕಾರಿ ಪದವಿ ಮಹಾವಿದ್ಯಾಲಯ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ “ನಾಗರೀಕರ ಮೂಲಭೂತ ಕರ್ತವ್ಯಗಳು” ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಹೇಗೆ ತಮ್ಮ ಕರ್ತವ್ಯಗಳನ್ನು ಪಾಲಿಸಿಕೊಂಡು ಅಭಿವೃದ್ಧ್ದಿ ಸಾಧಿಸಬೇಕೆಂಬ ಬಗ್ಗೆ ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ” ಪ್ರಸ್ತಾಪಿಸಿದ ಅವರು, ದ್ವೇಷ ಮತ್ತು ಅಸೂಯೆಯನ್ನು ಇಟ್ಟುಕೊಳ್ಳದೇ ಉದಾತ್ತತೆಯಿಂದ ಹೋರಾಡಿದರೆ, ನಿಮ್ಮ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಸಂವಿಧಾನದ ಧ್ಯೇಯೋದ್ದೇಶ ಮತ್ತು ಪ್ರಜೆಗಳ ಆಶೋತ್ತರಗಳಿಗೆ ಗೌರವ ಕೊಡಬೇಕೆಂದು ಹೇಳಿದ ಅವರು, ನಿಮ್ಮ ವಿದ್ಯಾಭ್ಯಾಸದಲ್ಲಿ ಅನ್ಯುನ್ನತ ಪಡೆಯುವುದು ಸಹ ಒಂದು ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾವತಿ ಎಮ್. ಕೆ. ಅವರು ಮಾತನಾಡಿ, ತಮ್ಮ-ತಮ್ಮ ಕರ್ತವ್ಯಗಳನ್ನು ಪರಿಪೂರ್ಣವಾಗಿ ಪಾಲಿಸಿದಲ್ಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಕೇವಲ ಅದೃಷ್ಟವನ್ನು ನಂಬದಿರಿ, ನೀವು ಯಾವ ಉದ್ದೇಶದಿಂದ ಕಾಲೇಜಿಗೆ ಬರುತ್ತಿರೋ ಆ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿ,  ತಕ್ಕ ಪರಿಶ್ರಮ ಪಟ್ಟರೆ ನಿಮ್ಮ ಬಾಳು ಒಳ್ಳÉಯದಾಗಲಿದೆ ಎಂದು ಹೇಳಿದರು. 
ನೀವು ಒಳ್ಳೆಯ ದಾರಿಯಲ್ಲಿ ಹೋದರೆ ನಿಮ್ಮ ಪೋಷಕರಿಗೆ, ನೀವು ಕಲಿತ ವಿದ್ಯಾ ಸಂಸ್ಥೆಗೆ ಹಾಗೂ ವೈಯಕ್ತಿಕವಾಗಿ ನಿಮಗೂ ಒಳಿತಾಗಲಿದೆ ಎಂದು ಹೇಳಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ|| ಸುಭಾಶ್ಚಂದ್ರ ಕೌಲಗಿ ಅವರು, ಕರ್ತವ್ಯ ಪಾಲನೆ ಕುರಿತಂತೆ ಬಸವಣ್ಣನವರ ವಚನಗಳನ್ನು ವಾಚನ ಮಾಡಿದರು. 
ಬಸವಣ್ಣನ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಸಾಕ್ಷಿ ಇರುತ್ತದೆ. ಆತ್ಮ ನಮ್ಮನ್ನು ಜಾಗೃತಿಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಕರ್ತವ್ಯಗಳನ್ನು ಪೂರೈಸಿದಾಗ ನÀಮ್ಮ ರಾಷ್ಟ್ರ ಸಂಪೂರ್ಣ ಸಮೃದ್ಧವಾಗುತ್ತದೆ. ಆಗ ನಮ್ಮ ವ್ಯಕ್ತಿತ್ವವೂ ಮಾದರಿಯಾಗುತ್ತದೆ ಎಂದು ಅವರು ಹೇಳಿದರು. 
ಸರ್ಕಾರಿ ನೌಕರನಿಗೆ ಮಾತ್ರ ಕರ್ತವ್ಯಗಳು ಸೀಮಿತವಾಗಿಲ್ಲ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಕರ್ತವ್ಯಗಳಿವೆ. ಅವುಗಳನ್ನು ಪಾಲಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ವಕೀಲರಾದ ಎಸ್. ನಿಂಗಣ್ಣ ಬಂದಳ್ಳಿ ಅವರು ಮೂಲಭೂತ ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರ ಗೀತೆ ಹಾಗೂ ರಾಷ್ಟ್ರ ಧ್ವಜವನ್ನು ಗೌರವಿಸಬೇಕು. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ಕೊಟ್ಟ ಉದಾತ್ತ ಆದರ್ಶಗಳನ್ನು ಮನನಗೊಳಿಸಬೇಕು. ತಮ್ಮ ಸಂಸ್ಕøತಿಗೆ ಪ್ರಪಂಚದಲ್ಲೇ ದೊಡ್ಡ ಹೆಸರಿದ್ದು, ಅದನ್ನು ಗೌರವಿಸಬೇಕು. ಪತ್ರಿಯೊಬ್ಬರು ಸಾಮರಸ್ಯವನ್ನು ಮತ್ತು ಭಾತೃತ್ವವನ್ನು ಪ್ರೇರೇಪಿಸಬೇಕು ಮುಂತಾದ ಮೂಲಭೂತ ಕರ್ತವ್ಯಗಳನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ವಿಶ್ವನಾಥ್ ಉಭಾಳೆ ಅವರು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದೇಶ್ವರಪ್ಪ,ಜಿ.ಬಿ. ಅವರು ಸ್ವಾಗತಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ದೇವಿಂದ್ರಪ್ಪ ಹಳ್ಳಿಮನಿ ಅವರು ವಂದಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ ಬಂಡಿಮನಿ ಅವರು ಕಾರ್ಯಕ್ರಮ ನಿರೂಪಿಸಿದರು.

ಮಂಗಳವಾರ, ಫೆಬ್ರವರಿ 28, 2017

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆ ಧ್ವನಿ-ಬೆಳಕಿನಲ್ಲಿ ಅನಾವರಣ ನೋಡುಗರನ್ನು ಮಂತ್ರಮುಗ್ಧವಾಗಿಸಿದ “ಭಾರತ ಭಾಗ್ಯ ವಿಧಾತ” ರೂಪಕ

ಯಾದಗಿರಿ, ಫೆಬ್ರವರಿ,25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಇಡೀ ಜೀವನ ಚರಿತ್ರೆಯನ್ನ “ಧ್ವನಿ-ಬೆಳಕು” ದೃಶ್ಯ ವೈಭವದಲ್ಲಿ ಅನಾವರಣಗೊಂಡಿತು. ಹೌದು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಇದಕ್ಕೆ ಸಾಕ್ಷಿಯಾಯಿತು. 
ಅಂಬೇಡ್ಕರ್ ಅವರು ಜನ್ಮ ದಿನದ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ಭಾಗ್ಯ ವಿಧಾತ “ಧ್ವನಿ-ಬೆಳಕು” ಕಾರ್ಯಕ್ರಮ ಜನಸಾಗರದ ಮನಸೊರೆಗೊಳಿಸಿತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ ಅಮಾನವೀಯ ಘಟನೆಗಳು, ಸಮಾಜಕ್ಕೆ ಪೆಡಂಭೂತವಾಗಿ ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮೆಟ್ಟಿನಿಂತು “ಭಾರತ ಭಾಗ್ಯ ವಿಧಾತ”ರಾಗಿ ಬೆಳೆದ ಪರಿಯನ್ನು 80ಕ್ಕೂ ಹೆಚ್ಚು ಕಲಾವಿದರು ಧ್ವನಿ-ಬೆಳಕಿನ ಮೂಲಕ ಜನರ ಕಣ್ಣಿಗೆ ಕಟ್ಟುವಂತೆ ಸಾದರ ಪಡಿಸಿದರು. 
ಸ್ತ್ರೀ ಶಿಕ್ಷಣ, ಸ್ತ್ರೀಯರಿಗೆ ಸಮಾನ ಆಸ್ತಿ ಹಕ್ಕು, ಹೆರಿಗೆ ರಜೆ, ಮಹಿಳೆಯರ ರಕ್ಷಣೆಗಾಗಿ ಕಾನೂನು ರೂಪಣೆ, 8 ತಾಸಿನ ದುಡಿಮೆ ಪದ್ಧತಿ ಜಾರಿ, ಭ್ರೂಣಹತ್ಯೆ ನಿಷೇಧ, ಅಸ್ಪøಶ್ಯತೆ ನಿವಾರಣೆಯಲ್ಲಿ ವಹಿಸಿದ್ದ ದಿಟ್ಟತನದೊಂದಿಗೆ ಭಾರತದ ಆರ್ಥಿಕ ವ್ಯವಸ್ಥೆ ಸಬಲೀಕರಣಕ್ಕೆ ಪೂರಕವಾದ ಭಾರತದ ಅವಧೂತ ಅಂಬೇಡ್ಕರ್ ನೀಡಿದ ಯೋಜನೆಗಳನ್ನು ಪೂರ್ತಿ ಕಾರ್ಯಕ್ರಮ ಬಿತ್ತರಿಸಿತು.
ಧ್ವನಿಗೆ ಅನುಸಾರವಾಗಿ ವೇದಿಕೆ ಹಿಂದಿನ ಪರದೆಯಲ್ಲಿ ಮೊಳಗುವ ದೃಶ್ಯಗಳು, ಸನ್ನಿವೇಶಗಳ ಮರುಸೃಷ್ಟಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಗೀಗಿಪದ, ಭೂತದ ಕೋಲ, ಡೊಳ್ಳು-ಕುಣಿತ, ಪುರವಂತರ ನೃತ್ಯ, ಜೋಗತಿ ಪದಗಳು ಹೀಗೆ ಜನಪದ ಪ್ರಕಾರಗಳು ಮೂಡಿಬಂದವು. ಕಾರ್ಯಕ್ರಮದುದ್ದಕ್ಕೂ ಅಂಬೇಡ್ಕರ್ ಅವರ ಬಾಲ್ಯ, ಹರೆಯ, ಶಿಕ್ಷಣ, ಹೋರಾಟ ಹಾಗೂ ತಲ್ಲಣದೊಂದಿಗೆ ಬುದ್ಧನ ಅಹಿಂಸಾ ತತ್ವದ ಪ್ರಚಾರಕರಾಗಿ, ಜಾತಿ ವಿನಾಶದ ಹೆಜ್ಜೆ ಇರಿಸಿದ ಅಂಬೇಡ್ಕರ್‍ರ ಜೀವನಗಾಥೆಯ ಪ್ರತಿಯೊಂದು ಹಂತವನ್ನೂ ರೂಪಕ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಯಿತು. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್.ವಿಶುಕಮಾರ್ ಅವರ ಪರಿಕಲ್ಪನೆಯ ಈ ರೂಪಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ, ಉಪಾಧ್ಯಕ್ಷರಾದ ಶ್ರೀ ಸ್ಯಾಮಸನ್ ಮ್ಯಾಳಿಕೇರಿ, ನಗರಸಭೆ ಸದಸ್ಯರಾದ ಶ್ರೀ ಮರೆಪ್ಪ ಚಟ್ಟರಕರ, ಅಪರ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದೇಶ್ವರಪ್ಪ. ಜಿ.ಬಿ, ತಹಶೀಲ್ದಾರರಾದ ಶ್ರೀ ಚನ್ನಮಲ್ಲಪ್ಪ ಘಂಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ಶ್ರೀಮತಿ ಅನಿತಾ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು.

ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು ರೂಪಕ ಬಲು ಸುಂದರ: ಶಾಸಕ ಡಾ|| ಎ.ಬಿ ಮಾಲಕರೆಡ್ಡಿ ಬಣ್ಣನೆ
*******************************************************************************************
ಯಾದಗಿರಿ, ಫೆಬ್ರವರಿ, 25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ “ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು” ರೂಪಕ ಬಲು ಸುಂದರ ಶಾಸಕರಾದ ಡಾ|| ಎ.ಬಿ ಮಾಲಕರೆಡ್ಡಿ ಅವರು ಬಣ್ಣನೆ ಮಾಡಿದ್ದಾರೆ. 
ತಮಟೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರದರ್ಶನವನ್ನು ಸಂಪೂರ್ಣವಾಗಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಜೀವನವೇ ಅದ್ಭುತ. ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೊರಾಡಿ ಕಾನೂನು ರೂಪಿಸಿದ್ದಾರೆ. ನಾವೆಲ್ಲ್ಲಾ ಒಂದೇ ತಾಯಿಯ ಮಕ್ಕಳಾಗಬೇಕೆಂಬ ಸಂದೇಶವನ್ನು ಅಂಬೇಡ್ಕರ್ ಅವರು ನೀಡಿದ್ದಾರೆ ಎಂದು ಗುಣಗಾನ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಜನರ ಹೃದಯ ಬದಲಾಯಿಸುವಂತಾಗಬೇಕು ಎಂದು ಅವರು ಪ್ರತಿಪಾದಿಸಿದರು.


ನಗರಸಭೆ ಅಧ್ಯಕ್ಷರಿಂದ ಕಲಾವಿದರಿಗೆ 25,000 ರೂಪಾಯಿ ನಗದು ಬಹುಮಾನ ನೀಡಿಕೆ

ಯಾದಗಿರಿ, ಫೆಬ್ರವರಿ, 25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿರುವ “ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು” ಕಾರ್ಯಕ್ರಮ ವೀಕ್ಷಿಸಿ ಸಂತುಷ್ಟರಾದ ನಗರಸಭೆ ಅಧ್ಯಕ್ಷರಾದ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ ಅವರು, ಪ್ರರ್ದಶನ ತೋರಿದ ಕಲಾವಿದರಿಗೆ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿದರು.
ಶಾಸಕ ಡಾ|| ಎ.ಬಿ ಮಾಲಕರೆಡ್ಡಿ ಅವರು ನಗರಸಭೆ ಅಧ್ಯಕ್ಷರ 25,000ರೂಪಾಯಿ ನಗದು ಬಹುಮಾನವನ್ನು ಕಲಾವಿದರಿಗೆ ಹಸ್ತಾಂತರಿಸಿದರು. 
ಯಾದಗಿರಿಯ ಮಹಾಜನತೆ ಪರವಾಗಿ ನಗದು ಬಹುಮಾನವನ್ನು ನೀಡುÀÅದಾಗಿ ನಗರಸಭೆ ಅಧ್ಯಕ್ಷರಾದ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ ಅವರು ಈ ಸಂದರ್ಭದಲ್ಲಿ ಹೇಳಿದರು.

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...