ಶುಕ್ರವಾರ, ಆಗಸ್ಟ್ 23, 2024

 ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ

ಆಗಸ್ಟ್ 27 ರಂದು ಕರ್ನಾಟಕ ಲೋಕಸಭಾ ಆಯೋಗದ ಪರೀಕ್ಷೆ

ಯಾದಗಿರಿ: ಆಗಸ್ಟ್ , 23 (ಕರ್ನಾಟಕ) : ಲೋಕಸೇವಾ ಆಯೋಗದ ವತಿಯಿಂದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆಯುವ ಪರೀಕ್ಷೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಸೂಚನೆ ನೀಡಿದರು.

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ  ನಡೆದ ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯ ಕುರಿತ ಸಭೆ ನಡೆಸಿ ಅವರು ಮಾತನಾಡಿದರು.

ಯಾದಗಿರಿ ನಗರದ ಪದವಿ ಕಾಲೇಜು, ನಗರದ ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗ, ಸರಕಾರಿ ಮಹಿಳಾ ಪಿಯು ಮತ್ತು ಬಾಲಕರ ಪಿಯು ಕಾಲೇಜು ( ಸ್ವಪ್ನಾ ಗ್ರೌಂಡ್), ಆದರ್ಶ ಮಹಾವಿದ್ಯಾಲಯದ ಒಟ್ಟು  ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 1542 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

2023ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳು ಆ. 27ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ರಿಂದ ಸಾಯಂಕಾಲ 4 ಗಂಟೆಯವರೆಗೆ ಪತ್ರಿಕೆ- 2 ಪರೀಕ್ಷೆಗಳು ಎರಡು ಪಾಳಿಯಲ್ಲಿ ನಡೆಯಲಿದೆ. ಜಿಲ್ಲೆಯ ಮುಖ್ಯ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯೋಗವು ನೀಡಿರುವ ಮಾರ್ಗಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ತಪಾಸಣಾ ಸಿಬ್ಬಂದಿ ಮೊದಲ ಹಂತದಲ್ಲಿ ಮುಖ್ಯಗೇಟ್ ಬಳಿಯೇ ನಿಲ್ಲಿಸಿ ತಪಾಸಣೆ ಮಾಡಿದ ನಂತರವೇ ಒಳಗೆ ಬಿಡಬೇಕು. ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ಎಲ್ಲಾ ಅಭ್ಯರ್ಥಿಗಳ ಗುರುತಿನ ಚೀಟಿ, ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ಅವರುಗಳ ಅಭ್ಯರ್ಥಿತ್ವದ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸಬೇಕು ಎಂದರು. ಪರೀಕ್ಷಾ ಕೊಠಡಿಗಳಲ್ಲಿನ ಸಿ.ಸಿ.ಟಿ.ವಿ  ಕ್ಯಾಮೆರಾಗಳು ಪರೀಕ್ಷಾ ಪ್ರಕ್ರಿಯೆ, ಅಭ್ಯರ್ಥಿಗಳ ಹಾಗೂ ಸಂವೀಕ್ಷಕರ ಚಲನವಲನ, ಮುಖಚಹರೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು. ಪರೀಕ್ಷಾ ಉಪಕೇಂದ್ರಗಳಿಗೆ ಜಾಮರ್ ಅಳವಡಿಸಬೇಕು ಎಂದರು.

ಪರೀಕ್ಷಾ ಕೊಠಡಿಗಳಲ್ಲಿ ಲೈಟ್ ಹಾಗೂ ಫ್ಯಾನ್ ವ್ಯವಸ್ಥೆ, ಕುಡಿಯುವ ನೀರು, ಗಡಿಯಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮಾರ್ಗಾಧಿಕಾರಿಗಳೂ ಪರೀಕ್ಷಾ ಪೂರ್ವ ದಿನದಂದು ಉಪಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲಿಸಿ ವರದಿ ಮಾಡಬೇಕು ಎಂದರು.

ಜಿಲ್ಲಾ ತ್ರಿಸದಸ್ಯರ ಸಮಿತಿಯ ಉಸ್ತುವಾರಿಯಲ್ಲಿ ಪರೀಕ್ಷೆಗೆ ಸಂಬಂಧಪಟ್ಟ ಗೌಪ್ಯ ಸಾಮಾಗ್ರಿಗಳನ್ನು ಜಿಲ್ಲಾ ಖಜಾನೆಯ ಸುಪರ್ದಿಯಲ್ಲಿಡಬೇಕು, ಪರೀಕ್ಷಾ ದಿನದಂದು ಸೂಕ್ತ ಬಂದೋಬಸ್ತ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ರವಾನಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ, ತಹಶೀಲ್ದಾರ ಸುರೇಶ ಅಂಕಲಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ವಿಷಯ ಪರಿವೀಕ್ಷಕ  ಬಸನಗೌಡ ಆಲ್ದಾಳ, ಹಣಮಂತ ಹೆಚ್, ಪ್ರಾಂಶುಪಾಲರಾದ  ನಿರ್ಮಲಾ, ರುದ್ರಗೌಡ, ದೇವಿಂದ್ರಪ್ಪ, ಶರಣಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 ವಾ.ವಿ.ಸಂ.127

“ದೀನ್ ದಯಾಳ್ ಸ್ಪರ್ಶ್ ಯೋಜನೆ” ಅರ್ಜಿ ಆಹ್ವಾನ

ಯಾದಗಿರಿ : ಆಗಸ್ಟ್ 23, (ಕ.ವಾ) : ಅಂಚೆ ಇಲಾಖೆಯು 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಭಾರತೀಯ ಅಂಚೆ ಇಲಾಖೆ ಅಧೀಕ್ಷಕರು ತಿಳಿಸಿದ್ದಾರೆ.

     9 ನೇ ತರಗತಿಗೆ ಫಾರ್ ಶಾಲಾ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹವನ್ನು ಉತ್ತೇಜಿಸಲು “ದೀನ್ ದಯಾಳ್ ಸ್ಪರ್ಶ್ ಯೋಜನೆ” ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ನೀಡುವುದು. ಸ್ಪರ್ಶ ಎಂದರೆ ಸ್ಟಾಂಪ್‌ಗಳಲ್ಲಿ ಅಭಿರುಚಿ ಮತ್ತು ಸಂಶೋಧನೆಯನ್ನು ಹವ್ಯಾಸವಾಗಿ ಉತ್ತೇಜಿಸಲು ವಿದ್ಯಾರ್ಥಿವೇತನ.

ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹವನ್ನು ಉತ್ತೇಜಿಸುವುದು ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಹವ್ಯಾಸವು ಅವರಿಗೆ ವಿಶ್ರಾಂತಿ ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ.   

     ಯೋಜನೆಯಡಿಯಲ್ಲಿ, 2023-24 ಶೈಕ್ಷಣಿಕ ವರ್ಷದಲ್ಲಿ 60 ಅಂಕಗಳನ್ನು ಹೊಂದಿರುವ ಮತ್ತು ಅಂಚೆ ಚೀಟಿಗಳ ಸಂಗ್ರಹದ ಠೇವಣಿ ಖಾತೆ, ಫಿಲಾಟೆಲಿಕ್ ಕ್ಲಬ್‌ನ ಸದಸ್ಯ ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಮುಂದುವರಿಸುವ 6ನೇ ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 6000 ರೂ.ಗಳ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವರ್ಷ ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆ ಚೀಟಿಗಳ ಸಂಗ್ರಹ ಯೋಜನೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬೇಕಾಗುತ್ತದೆ. ಹಂತ-1 ಅಂಚೆ ಚೀಟಿಗಳ ಸಂಗ್ರಹದ ರಸ ಪ್ರಶ್ನೆಯಲ್ಲಿ ಭಾಗವಹಿಸಲು 2024ರ ಸೆಪ್ಟೆಂಬರ್ 3ರ ಒಳಗೆ ಅರ್ಜಿಸಲ್ಲಿಸಬೇಕು. ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ಯೋಜನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.indiapost.gov.in, www.karnatakapost.gov.inನಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಪರಿಷ್ಕೃತ  ಪ್ರಕಟಣೆ;

----------------------------


ಮಹಾತ್ಮ ಗಾಂಧೀಜಿ 155ನೇ ಜಯಂತಿ

ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ 

ಯಾದಗಿರಿ :ಆಗಸ್ಟ್ :23 (ಕರ್ನಾಟಕ ವಾರ್ತೆ):ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.  

ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲು ಉದ್ದೇಶಿಸಲಾಗಿದೆ.   ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ 31 ಸಾವಿರ ರೂ. ದ್ವಿತೀಯ            21 ಸಾವಿರ ರೂ. ಮತ್ತು ತೃತೀಯ 11 ಸಾವಿರ ರೂ. ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ 3 ಸಾವಿರ ರೂ. ದ್ವಿತೀಯ 2 ಸಾವಿರ ರೂ ಮತ್ತು ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು. 

ಪ್ರೌಢ ಶಾಲಾ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ, 3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, 4) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ,  ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧ  ಬರೆಯಬೇಕು.  

ಪದವಿ ಪೂರ್ವ ಶಿಕ್ಷಣ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು, 3) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ, 4) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ,  ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.  

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :- 1) ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ, 2) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು, 3) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು, 4) ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ, 5) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು.  ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.  

ದಿನಾಂಕ : 10-09-2024 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸ್ಪರ್ಧೆ ಏರ್ಪಡಿಸಿ ದಿನಾಂಕ : 12-09-2024 ರೊಳಗಾಗಿ  ಮೌಲ್ಯಮಾಪನ ಮಾಡಿ, ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಲಿದೆ.  ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು. 

ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರಿಗೆ ಗೌರವಿಸಲಾಗುವುದು. 

ನಿಬಂಧನೆಗಳು :-

ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು.  ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ / ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು.  ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ / ಆಧಾರ ಗ್ರಂಥಗಳು / ಮೊಬೈಲ್ ಗಳ ಬಳಕೆಗೆ ಅವಕಾಶವಿರುವುದಿಲ್ಲ. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು.  ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ.

 ವಾ.ವಿ.ಸಂ.126

ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಅರ್ಜಿ ಆಹ್ವಾನ

ಯಾದಗಿರಿ : ಆಗಸ್ಟ್ 23, (ಕ.ವಾ) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ಅವರು ತಿಳಿಸಿದ್ದಾರೆ.

    ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ಡಿ-ಸಿಇಟಿ/ಪಿಜಿ-ಸಿಇಟಿ/ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್/ಡಿ.ಎಂ.ಎಸ್), ದಂತವೈದ್ಯಕೀಯ (ಬಿ.ಡಿ.ಎಸ್/ಎಂ.ಡಿ.ಎಸ್)ಆಯುಷ್(ಬಿ.ಆಯುಶ್/ಎಂ.ಆಯುಶ್)ಇಂಜಿನಿಯರಿಂಗ್/ಟೆಕ್ನಾಲಜಿ(ಬಿ.ಇ/ ಬಿ.ಟೆಕ್/ಎಂ.ಇ/ಎಂ.ಟೆಕ್) ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ್/ಎಂ.ಆರ್ಕ್), ಬಿ.ಎಸ್.ಇ ಹೊರಟಿಕಲ್ಚರ್ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಫಾರ್ಮಾಸ್ಯುಟಿಕಲ್, ಮುಂತಾದ  ಕೋರ್ಸ್ ಗಳಲ್ಲಿ ಆಯ್ಕೆಯಾಗಿರುವಂತಹ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಂದರೆ ಮುಸಲ್ಮಾನರು, ಕ್ರೈಸ್ತರು, ಜೈನರು, ಭೌದ್ಧ ಧರ್ಮಿಯರು ಸಿಖ್ಖರು ಮತ್ತು ಪಾರ್ಸಿ, ಸಮುದಾಯದವರಿಗೆ "ಅರಿವು (ರಿನ್ಯೂವಲ್)” ವಿದ್ಯಾಭ್ಯಾಸ ಸಾಲ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 

     ಅರ್ಜಿಸಲ್ಲಿಸುವಾಗ ನಿಗಮದಿಂದ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ.12 ರಷ್ಟ ಪಾವತಿಸಬೇಕಾಗಿರುತ್ತದೆ. ಶೇ.12 ರಷ್ಟು ಮೊತ್ತ ಆನ್‌ಲೈನ್ ಮುಖಾಂತರ ಪಾವತಿಸಬೇಕು. ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು, ರಿನ್ಯೂವಲ್ ಮೊತ್ತ ಪಾವತಿಸುವುದು ಅಗತ್ಯವಿರುವುದಿಲ್ಲಾ. ಆನ್‌ಲೈನ್‌ kmdconline.karnataka.gov.inನಲ್ಲಿ 2024ರ ಅಕ್ಟೋಬರ್ 31ರ ಒಳಗೆ ಅರ್ಜಿಸಲ್ಲಿಸಬೇಕು, ನಂತರ ಮೂಲ ದಾಖಲಾತಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂ.8277799990 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವಾ.ವಿ.ಸಂ.125

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

ಯಾದಗಿರಿ : ಆಗಸ್ಟ್ 23, (ಕ.ವಾ) : ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಆಗಸ್ಟ್ 26 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಪ್ರವಾಸವು ಕೆಳಗಿನಂತಿದೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಶ್ರೀಶೈಲ ಜಿ.ಬಿದರಕುಂದಿ ಅವರು ತಿಳಿಸಿದ್ದಾರೆ.

     2024ರ ಆಗಸ್ಟ್ 26ರ ಸೋಮವಾರ ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ದಿಂದ ನಿರ್ಗಮಿಸಿ ಬೆಳಿಗ್ಗೆ  10 ಗಂಟೆಗೆ ಆಗಮಿಸಿ ಶಹಾಪೂರ ನಗರದಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನಂತರ ಸಂಜೆ 5.30 ಗಂಟೆಗೆ ಕಲಬುರಗಿ ಪ್ರಯಾಣ ಬೆಳೆಸುವರು.

 ವಾ.ವಿ.ಸಂ.124

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ : ಆಗಸ್ಟ್ 23, (ಕ.ವಾ) : 2024-25ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಅವರು ತಿಳಿಸಿದ್ದಾರೆ.

     ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನವರ್ವಸತಿ ಯೋಜನೆಗಳ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆಹ್ವಾನಿಸಿದೆ. ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾಕೇಂದ್ರ, ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ 2024ರ ಸೆಪ್ಟೆಂಬರ್ 21 ರಂದು ಸಂಜೆ 5.30 ಗಂಟೆ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಕೋಣೆ ಸಂಖ್ಯೆ ಸಿ-17, ಒಂದನೇ ಮಹಡಿ, ಜಿಲ್ಲಾಡಳಿತ ಭವನ, ಯಾದಗಿರಿ ದೂ.ಸಂ.08473 253739, 8105395485ಗೆ ವೆಬ್‌ಸೈಟ್ sevasindhu.karnataka.gov.inನಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವಾ.ವಿ.ಸಂ.122

ಆ.26 ರಂದು ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮ

ಯಾದಗಿರಿ : ಆಗಸ್ಟ್ 23, (ಕ.ವಾ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಕೃಷ್ಣ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಯಾದಗಿರಿ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ 2024ರ ಆಗಸ್ಟ್ 26ರ ಸೋಮವಾರ ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

     ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಶ್ರೀ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸುವರು.

     ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷ ನಾಯಕ ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ನೆರವೇರಿಸುವರು. ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸುವರು. ರಾಯಚೂರು ಲೋಕಸಭಾ ಸದಸ್ಯರು ಶ್ರೀ ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು ಶ್ರೀ ರಾಧಾಕೃಷ್ಣ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

     ವಿಧಾನ ಪರಿಷತ್ತು ಸದಸ್ಯರು ಶ್ರೀ ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್, ಶ್ರೀ ಶಶೀಲ್ ಜಿ.ನಮೋಶಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಶರಣಗೌಡ ಕಂದಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಶ್ರೀ ವಿನಾಯಕ ಮಾಲಿ ಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳುವರು. 

     ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರು ಹಾಗೂ ಸರ್ವರೂ ಆಗಮಿಸುವಂತೆ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ಸಂಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಅವರು ಪ್ರಕಟಣೆ ಕೋರಿದೆ.

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...