ಶುಕ್ರವಾರ, ಅಕ್ಟೋಬರ್ 23, 2020

 ಆಸ್ಪತ್ರೆಗಳಲ್ಲಿಯೇ ಅರ್ಹರಿಗೆ ಆಯುಷ್ಮಾನ್ ಕಾರ್ಡ್ ಒದಗಿಸಲು ಜಿಲ್ಲಾಧಿಕಾರಿ ಸೂಚನೆ 

ಯಾದಗಿರಿ, ಅಕ್ಟೋಬರ್.23 (ಕರ್ನಾಟಕ ವಾರ್ತೆ):- ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಬರುವ ಅರ್ಹರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಅವರು ನಿರ್ದೇಶನ ನೀಡಿದರು. 

ಅವರು ಅ.23ರ ಶುಕ್ರವಾರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಇ-ಆಸ್ಪತ್ರೆ ಹಾಗೂ ಇ-ಸಂಜೀವಿನಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತಿದಿನ ಸಾಕಷ್ಟು ಸಂಖ್ಯೆಯ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ, ಅವರಲ್ಲಿ ಅರ್ಹರಿಗೆ ಸಂಬಂಧಿಸಿದ ಆಸ್ಪತ್ರೆಗಳಲ್ಲಿಯೇ ಆಯುಷ್ಮಾನ್ ಕಾರ್ಡ್ ಮುದ್ರಿಸಿ ನೀಡುವ ವ್ಯವಸ್ಥೆ ಮಾಡಬೇಕು, ಸಂಬಂಧಿಸಿದ ಆಸ್ಪತ್ರೆಗಳಲ್ಲಿಯೇ ಆಯುಷ್ಮಾನ್ ಕಾರ್ಡ್ ನೀಡಿದ್ದಲ್ಲೀ, ಮುಂಬರುವ ಎರಡು ತಿಂಗಳಲ್ಲಿ ಅರ್ಹರೆಲ್ಲರಿಗೂ ಆಯುಷ್ಮಾನ್ ಕಾರ್ಡ್ ತಲುಪಿಸಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಅಧಿಕಾರಿಗಳಿಗೆ ಸೂಚಿಸಿದರು. 

 ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಗಳಲ್ಲಿ ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ  ಬರುವ ಅರ್ಹರಿಗೆ ಈ ಕಾರ್ಡ್ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಭಗವಂತ ಅನ್ವರ್, ಡಾ. ಸಂಜೀವ ಕುಮಾರ್ ಸೇರಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಅಧಿಕಾರಿಗಳು ಉಪಸ್ಥಿತರಿದ್ದರು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...