ಶುಕ್ರವಾರ, ಅಕ್ಟೋಬರ್ 23, 2020

 ಆಸ್ಪತ್ರೆಗಳಲ್ಲಿಯೇ ಅರ್ಹರಿಗೆ ಆಯುಷ್ಮಾನ್ ಕಾರ್ಡ್ ಒದಗಿಸಲು ಜಿಲ್ಲಾಧಿಕಾರಿ ಸೂಚನೆ 

ಯಾದಗಿರಿ, ಅಕ್ಟೋಬರ್.23 (ಕರ್ನಾಟಕ ವಾರ್ತೆ):- ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಬರುವ ಅರ್ಹರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಅವರು ನಿರ್ದೇಶನ ನೀಡಿದರು. 

ಅವರು ಅ.23ರ ಶುಕ್ರವಾರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಇ-ಆಸ್ಪತ್ರೆ ಹಾಗೂ ಇ-ಸಂಜೀವಿನಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತಿದಿನ ಸಾಕಷ್ಟು ಸಂಖ್ಯೆಯ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ, ಅವರಲ್ಲಿ ಅರ್ಹರಿಗೆ ಸಂಬಂಧಿಸಿದ ಆಸ್ಪತ್ರೆಗಳಲ್ಲಿಯೇ ಆಯುಷ್ಮಾನ್ ಕಾರ್ಡ್ ಮುದ್ರಿಸಿ ನೀಡುವ ವ್ಯವಸ್ಥೆ ಮಾಡಬೇಕು, ಸಂಬಂಧಿಸಿದ ಆಸ್ಪತ್ರೆಗಳಲ್ಲಿಯೇ ಆಯುಷ್ಮಾನ್ ಕಾರ್ಡ್ ನೀಡಿದ್ದಲ್ಲೀ, ಮುಂಬರುವ ಎರಡು ತಿಂಗಳಲ್ಲಿ ಅರ್ಹರೆಲ್ಲರಿಗೂ ಆಯುಷ್ಮಾನ್ ಕಾರ್ಡ್ ತಲುಪಿಸಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಅಧಿಕಾರಿಗಳಿಗೆ ಸೂಚಿಸಿದರು. 

 ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಗಳಲ್ಲಿ ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ  ಬರುವ ಅರ್ಹರಿಗೆ ಈ ಕಾರ್ಡ್ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಭಗವಂತ ಅನ್ವರ್, ಡಾ. ಸಂಜೀವ ಕುಮಾರ್ ಸೇರಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಅಧಿಕಾರಿಗಳು ಉಪಸ್ಥಿತರಿದ್ದರು. 


ಗುರುವಾರ, ಅಕ್ಟೋಬರ್ 22, 2020

ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ಶ್ಲಾಘನೆ
 ಕೋವಿಡ್ ಸಂದರ್ಭದಲ್ಲಿ ಪೊಲೀಸರ ಕರ್ತವ್ಯ ಸ್ಮರಣಿಯ

ಯಾದಗಿರಿ, ಅಕ್ಟೋಬರ್ 21 (ಕರ್ನಾಟಕ ವಾರ್ತೆ): ಕೋವಿಡ್, ಪ್ರವಾಹ ಸಂದರ್ಭಲ್ಲಿ ಪೊಲೀಸರು ಸಲ್ಲಿಸಿದ ಕರ್ತವ್ಯ ಸೇವೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್ ಅವರು ಪೊಲೀಸರ ಕಾರ್ಯವನ್ನು ಶ್ಲಾಘನೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಅಕ್ಟೋಬರ್ 21ರಂದು ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯದ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಹಾಗೂ ನೆರೆÀ ಪ್ರವಾಹ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಯಾವ ರೀತಿಯಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು? ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು? ಎಂಬುದಾಗಿ ಪೊಲೀಸರು ಯೋಚನೆ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಕೂಡ ಕಾನೂನು ಪಾಲನೆ ಮಾಡುತ್ತಾ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
1959ರ ಅಕ್ಟೋಬರ್ 21ರಂದು ಲಡಾಕ್‍ನಲ್ಲಿ ಕರ್ತವ್ಯ ಪಾಲನೆಯ ಸಂದರ್ಭದಲ್ಲಿ 10ಜನ ಪೊಲೀಸ್‍ರು ಹುತಾತ್ಮರಾದ ದಿನದ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದಲ್ಲಿ ಒಟ್ಟು 264 ಹಾಗೂ ಕರ್ನಾಟಕದಲ್ಲಿ 17 ಜನ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹೇಳಿದ ಅವರು, ಕರ್ತವ್ಯ ಪಾಲನೆಯಲ್ಲಿ ಹುತಾತ್ಮರಾದ ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಆಯುಷ್ಯ, ಆರೋಗ್ಯ ನೀಡಲೆಂದು ಅವರು ದೇವರಲ್ಲಿ ಪ್ರಾರ್ಥಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಮಾತನಾಡಿ, 1959ರ ಅಕ್ಟೋಬರ್ 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್‍ಪಿಎಫ್ ಡಿಎಸ್‍ಪಿ ಕರಣಸಿಂಗ್ ಅವರ ನೇತೃತ್ವದಲ್ಲಿ ಪೊಲೀಸ್ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗನ್ನು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ 10 ಜನ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆಯ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ದೇಶದಾದ್ಯಂತ ಎಲ್ಲಾ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣವನ್ನು ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಈ ದಿನ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು 264 ಜನ ಪೊಲೀಸರು ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವರಲ್ಲಿ ಕರ್ನಾಟಕದ 17 ಜನ ಧೀರ ಪೊಲೀಸ್ ಯೋಧರಾದ ಮನೋಹರ ಎಸ್. ಗಣಾಚಾರಿ, ಚನ್ನಕೇಶವ ಬಿ.ಸಿ, ಸಿ ಮಲ್ಲೇಶಾಹ, ಚಂದ್ರಹಾಸ, ಯಲ್ಲಪ್ಪ ರಾಮಪ್ಪ ತಳವಾರ, ಶ್ರೀನಿವಾಸ ಎಂ, ಮಂಜುನಾಥ ಕೆ, ಕುಮಾರ ಕೆ.ಆರ್, ಧನಂಜಯ ವಾಯ್, ಮರಿಸ್ವಾಮಿ, ವೆಂಕಟೆ ಗೌಡ ಬಿ.ಎನ್, ಕೇಶವ್, ಚನ್ನಗಂಗಯ್ಯ, ರಾಮನಾಯ್ಕ ದುಂಡಪ್ಪ ನಾಯ್ಕ, ಮೋಹನ್ ಟಿ.ಪಿ, ಕರಿಯಪ್ಪ ಎಸ್. ಕರಿಗಾರ, ಎಸ್.ಎನ್ ಕೊಲಿ ಅವರು ಸೇರಿದ್ದಾರೆ ಎಂದು ವಿವರಿಸಿದರು.
ಪುಷ್ಪಗುಚ್ಛ ಅರ್ಪಣೆ: ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಪುಷ್ಪಗುಚ್ಛ ಅರ್ಪಿಸಿದರು.ಯಾದಗಿರಿ ಸುರಪುರ ವಿಭಾಗದ ಡಿವೈಎಸ್‍ಪಿ ವೆಂಕಟೆಶ ಉಗಿಬಂಡಿ,ಯವರು ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಇಂದುಧರ ಸಿನ್ನೂರ, ಟಿ.ವಿ 9 ಜಿಲ್ಲಾ ವರದಿಗಾರರಾದ ಅಮೀನ್ ಹೊಸೂರು, ಪ್ರಜಾವಾಣಿ ಜಿಲ್ಲಾ ವರದಿಗಾರ ಬಿ.ಜಿ ಪ್ರವೀಣಕುಮಾರ, ಕ್ರಾಂತಿ ಕನ್ನಡ ದಿನ ಪತ್ರಕೆಯ ಜಿಲ್ಲಾ ವರದಿಗಾರರಾದ ಸಾಗರಕುಮಾರ ದೇಸಾಯಿ, ಸಗರನಾಡು ಪತ್ರಿಕೆಯ ಸಂಪಾದಕರಾದ ಸಿದ್ದಪ್ಪ ಲಿಂಗೇರಿ ಸೇರಿದಂತೆ ಮಾಧ್ಯಮ ಮಿತ್ರರು, ಹುತಾತ್ಮ ಪೊಲೀಸರ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‍ಎಸ್‍ಐ ಚಂದ್ರಶೇಖರ ಅವರ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು. ಕಾನ್‍ಸ್ಟೆಬಲ್ ಸಂತೋಷ ಎಂ. ಜಯಕರ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...