ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ
ಹೊಸ ತಾಲೂಕು ರಚನೆ: ಅ.3 ರೊಳಗೆ ವಿವರ ಸಲ್ಲಿಸಲು ಸೂಚನೆ
ಯಾದಗಿರಿ: ಸೆಪ್ಟೆಂಬರ್ 18, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹೊಸದಾಗಿ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲೂಕು ಕೇಂದ್ರಗಳನ್ನು ರಚಿಸುವ ಕುರಿತು ಅಗತ್ಯ ಕಚೇರಿ, ಸಿಬ್ಬಂದಿಗಳನ್ನೊಳಗೊಂಡ ಮಾಹಿತಿಯನ್ನು ಅಕ್ಟೋಬರ್ 3ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಶ್ರೀ ಮಂಜುನಾಥ ಜೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೊಸ ತಾಲೂಕು ರಚನೆಗೆ ಕಚೇರಿ ಕಟ್ಟಡ, ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕು ರಚನೆಯಲ್ಲಿ ಸರ್ಕಾರ ಸೂಚಿಸಿರುವ ಮಾನದಂಡಗಳನ್ನು ಅನುಸರಿಸಿ ಅಗತ್ಯವಿರುವ ಕಚೇರಿಗಳನ್ನು ಆರಂಭ ಮಾಡುವ ಕುರಿತು ಚರ್ಚಿಸಲಾಯಿತು.
ನೂತನ ತಾಲೂಕು ಕೇಂದ್ರಗಳಿಲ್ಲಿ ಅಗತ್ಯವಿರುವ ಕಚೇರಿಗಳನ್ನು ಪ್ರಾರಂಭಿಸಲು ವಿವಿಧ ಇಲಾಖೆಗಳಿಗೆ ಬೇಕಿರುವ ಕಟ್ಟಡಗಳನ್ನು ಬಾಡಿಗೆ ಅಥವಾ ಸ್ವಂತ ಕಟ್ಟಡದಲ್ಲಿ ಜನವರಿಯಲ್ಲಿ ಪ್ರಾರಂಭಿಸಬೇಕಿದೆ ಎಂದು ಅವರು ಹೇಳಿದರು.
ಪ್ರಮುಖವಾಗಿ ತಾಲೂಕು ಪಂಚಾಯತಿ ಕಾರ್ಯಾಲಯ, ತಹಸೀಲ್ದಾರರು, ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ, ಅರಣ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಕಚೇರಿಗಳಿಗೆ ಕಟ್ಟಡಗಳನ್ನು ಪಡೆಯಲು ಅವರು ಸೂಚಿಸಿದರು. ಬಾಡಿಗೆಗೆ ಪಡೆಯುವ ಕಟ್ಟಡಗಳು ಶೌಚಾಲಯದಂತ ಮೂಲ ಸೌಕರ್ಯಗಳನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಯಾದಗಿರಿ, ಸುರಪೂರ ಹಾಗೂ ಶಹಾಪೂರ ತಾಲೂಕಿನಲ್ಲಿ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಜಮೀನುಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ಕೆ.ನಾಯಕ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಸಂತರಾವ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 3 ತಾಲೂಕಿನ ತಹಸೀಲ್ದಾರರು, ವಿಶೇಷ ತಹಸೀಲ್ದಾರರು ಸಭೆಯಲ್ಲಿ ಹಾಜರಿದ್ದರು.



