ಶನಿವಾರ, ಸೆಪ್ಟೆಂಬರ್ 17, 2016

371 (ಜೆ) ಕಲಂನ ವಿಶೇಷ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು
                           -:ಸಚಿವ ಶ್ರೀ ಪ್ರಿಯಾಂಕ್ ಎಂ. ಖರ್ಗೆ 
ಯಾದಗಿರಿ: ಸೆಪ್ಟಂಬರ್, 17 (ಕರ್ನಾಟಕ ವಾರ್ತೆ) ಹೈದ್ರಾಬಾದ್-ಕರ್ನಾಟಕಕ್ಕೆ  ಪ್ರಾಪ್ತವಾಗಿರುವ 371 (ಜೆ) ಕಲಂ ಅನ್ನು  ಸದುಪಯೋಗ ಪಡಿಸಿಕೊಳ್ಳಬೇಕು. ಇದರ ವಿಶೇಷ ಸವಲತ್ತುಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಿಯಾಂಕ್ ಎಂ. ಖರ್ಗೆ ಕರೆ ನೀಡಿದ್ದಾರೆ.
 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಿತಿ, ಭಾವೈಕ್ಯತಾ ಸಮಿತಿ, ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಹೈದ್ರಾಬಾದ್-ಕರ್ನಾಟಕದ ಜಿಲ್ಲೆಗಳು ಪ್ರಗತಿ ಸಾಧಿಸಬೇಕು. ರಾಜ್ಯದ ಇತರೆ ಭಾಗಗಳಿಗೆ ಸಮಾನ ಪೈಪೋಟಿ ನೀಡಬೇಕು. ಆಗ ಮಾತ್ರ ಸುವರ್ಣ ಕರ್ನಾಟಕ ಸಾಧ್ಯ. ನಾವೆಲ್ಲರೂ ಸೇರಿ ಸುವರ್ಣ ಕರ್ನಾಟಕ ನಿರ್ಮಾಣ ಮಾಡಲು ಶ್ರಮಿಸೋಣ ಎಂದು ಹೇಳಿದರು.
371 (ಜೆ) ಕಲಂ ಜಾರಿಯಿಂದ ಹೈದ್ರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಈಗಾಗಲೇ 11 ಸಾವಿರ ಉದ್ಯೋಗ ಈ ಭಾಗದ ಕೋಟಾದಲ್ಲಿ ತುಂಬಲಾಗಿದೆ ಎಂದು ಹೇಳಿದರು.
ದಶಕಗಳ ಹೋರಾಟದ ಫಲವಾಗಿ ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಿಯಾಂಕ್ ಎಂ. ಖರ್ಗೆ, ಈ ಸ್ಥಾನ ಸಿಗುವಲ್ಲಿ ಹಾಲಿ ಕಲಬುರಗಿ ಲೋಕಸಭಾ ಸದಸ್ಯರಾದ ಡಾ|| ಮಲ್ಲಿಕಾರ್ಜುನ್ ಖರ್ಗೆ ಅವರ ಶ್ರಮ ಅಪಾರವಿದೆ ಎಂದು ಗುಣಗಾನ ಮಾಡಿದರು.
ತೆಲಂಗಾಣ ಮತ್ತು ಮಹಾರಾಷ್ಟ್ರದ ವಿದರ್ಭಗೆ ನೀಡಿರುವ ಸವಲತ್ತುಗಳಿಗಿಂತ 371 (ಜೆ) ಕಲಂನಲ್ಲಿ ಹೆಚ್ಚು ಸವಲತ್ತುಗಳನ್ನು ರಾಜ್ಯ ಸರ್ಕಾರ ಕಲ್ಪಸಿದೆ ಎಂದು ಪ್ರಿಯಾಂಕ್ ಎಂ. ಖರ್ಗೆ ಪ್ರಶಂಸಿಸಿದರು.
ಹೈದ್ರಾಬಾದ್-ಕರ್ನಾಟಕ ವಿಮೋಚನೆಗಾಗಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ನಡೆದ ಚಳುವಳಿಗಳು, ನಿಜಾಮರಿಂದ ವಿಮೋಚನೆಗೊಳಿಸುವಲ್ಲಿ ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ವಹಿಸಿದ ಪಾತ್ರ ಮುಂತಾದ ಘಟನಾವಳಿಗಳನ್ನು ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾಲಾನುಕ್ರಮವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶ್ರೀ ಭಾಸ್ಕರ್ ರಾವ್ ಮೂಡಬಾಳ ಅವರು ಹೈದ್ರಾಬಾದ್-ಕರ್ನಾಟಕ ವಿಮೋಚನೆ ಬಗ್ಗೆ  ವಿಶೇಷ ಉಪನ್ಯಾಸ ನೀಡಿದರು.  
ಅಂದು ಸ್ವಾತಂತ್ರ್ಯ ಹೋರಾಟಗಾರ ಕೊಲ್ಲೂರು ಮಲ್ಲಪ್ಪ ಈ ಭಾಗದ ವಿಮೋಚನೆಗಾಗಿ ಹೋರಾಡಿದ ಧೀಮಂತ ನಾಯಕರು. ಅವರಂತೆಯೇ ಸಂಸದರಾದ ಡಾ|| ಮಲ್ಲಿಕಾರ್ಜುನ್ ಖರ್ಗೆ ಅವರು ಇಂದು ಈ ಭಾಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹಾಡಿ ಹೊಗಳಿದರು.
ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಮತ್ತು ಪೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಯಾದಗಿರಿಯ ಕೋಲಿವಾಡ ಸರಕಾರಿ ಮಾದರಿ ಶಾಲೆಯ ಮಕ್ಕಳು ನಡೆಸಿಕೊಟ್ಟ “ಸರ್ದಾರ್ ವಲ್ಲಭ ಬಾಯಿ ಪಟೇಲ್” ಎಂಬ ರೂಪಕ ನೆರೆದವರ ಗಮನ ಸೆಳೆಯಿತು. ಹಾಗೆಯೇ ಯಾದಗಿರಿ ತಾಲೂಕು ಮೋಟ್ನಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ತೋರಿದ ಸಾಹಸ ಕಸರತ್ತು ಮೈನವಿರೇಳಿಸಿತು.  
ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಗುರುಮಠಕಲ್ ಶಾಸಕರಾದ ಶ್ರೀ ಬಾಬುರಾವ್ ಚಿಂಚನಸೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಸರೆಡ್ಡಿಗೌಡ ಮಾಲಿ ಪಾಟೀಲ್ ಅನಪೂರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ರವೀಂದ್ರ ಗೌಡ ಮಾಲಿ ಪಾಟೀಲ್, ನಗರಸಭೆ ಉಪಾಧ್ಯಕ್ಷರಾದ ಸ್ಯಾಮ್ಸನ್ ಮ್ಯಾಳಿಕೇರಿ, ತಾಲೂಕು ಪಂಚಾಯತ್ ಅಧ್ಯಕ್ಷ ಶ್ರೀ ಬಾಷು ಎಸ್. ರಾಠೋಡ್, ಜಿಲ್ಲಾಧಿಕಾರಿಗಳಾದ ಶ್ರೀಮತಿ ಖುಷ್ಬೂ ಗೋಯಲ್ ಚೌಧರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ವಿನಾಯಕ ವಿ. ಪಾಟೀಲ್, ಅಪರ ಜಿಲ್ಲಾಧಿಕಾರಿಗಳಾದ ಡಾ|| ಸತೀಶ್ಚಂದ್ರ ಅವರು ಹಾಜರಿದ್ದರು.
ಉಪವಿಭಾಗಾಧಿಕಾರಿ ಡಾ|| ಜಗದೀಶ್ ಅವರು ವಂದಿಸಿದರು. ಶ್ರೀ ಅಮರಯ್ಯಾ ಸ್ವಾಮಿ ಜಾಲಿಬೆಂಚಿ ಅವರು ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...